ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕೂ ವಿಭಾಗಗಳು ಮೇ 18ರಿಂದ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದ್ದು, ಲಾಕ್ಡೌನ್ ನಂತರ ಬ್ರೇಕ್ ಡೌನ್ ಸಮಸ್ಯೆಯಿಂದ ಒದ್ದಾಡುವ ಸಾಧ್ಯತೆ ಇದೆ.
ಐಷಾರಾಮಿ ಬಸ್ ಸಜ್ಜುಗೊಳಿಸುವುದೇ ದೊಡ್ಡ ಸವಾಲು ಸದ್ಯದ ಮಾಹಿತಿ ಪ್ರಕಾರ ಕೇಂದ್ರದ ಹೊಸ ನಿಯಮಾವಳಿಗಳು ಇಂದು ಘೋಷಣೆಯಾಗುವ ಸಾಧ್ಯತೆ ಇದೆ. ಅದರ ಪ್ರಕಾರ ಇನ್ನಷ್ಟು ಕ್ಷೇತ್ರಗಳಿಗೆ ನಿರಾಳತೆ ಸಿಗಲಿದ್ದು, ಕಡಿಮೆ ಪ್ರಮಾಣದಲ್ಲಿ ಕೆಲ ಜಿಲ್ಲೆಗಳಲ್ಲಿ ಬಸ್ ಸಂಚಾರ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ವೋಲ್ವೊ, ಹವಾನಿಯಂತ್ರಿತ ಬಸ್ಗಳ ಸಂಚಾರಕ್ಕೆ ಅವಕಾಶ ಸಿಗುವುದು ಅಸಾಧ್ಯ.
ಉಳಿದಂತೆ ಕೆಎಸ್ಆರ್ಟಿಸಿ, ಎನ್ಇಕೆಆರ್ಟಿಸಿ, ಎನ್ಡಬ್ಲ್ಯೂಆರ್ಟಿಸಿಗಳ ಕರ್ನಾಟಕ ಸಾರಿಗೆ, ರಾಜಹಂಸ, ಸೆಮಿ ಸ್ಲೀಪರ್, ಸ್ಲೀಪರ್ವರೆಗಿನ ಬಸ್ ಸಂಚರಿಸಲು ಪರವಾನಗಿ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ಬಿಎಂಟಿಸಿಯಲ್ಲೂ ವೋಲ್ವೊ, ವಾಯುವಜ್ರ ಹೊರತುಪಡಿಸಿ ಉಳಿದ ಮಾದರಿಯ ಬಸ್ ಓಡುವ ಸಾಧ್ಯತೆ ಇದೆ.
ಸಾಮಾನ್ಯ ಬಸ್ಗಳ ಸಂಚಾರಕ್ಕೆ ಅವಕಾಶ ಸಿಗುವ ಸಾಧ್ಯತೆ ಹಿನ್ನೆಲೆ ತಪಾಸಣೆಗೆ ಒಳಗಾಗುತ್ತಿವೆ. ಬಸ್ ನಿಲ್ದಾಣದಲ್ಲಿ, ಘಟಕದಲ್ಲಿ 50ಕ್ಕೂ ಹೆಚ್ಚಿನ ದಿನ ನಿಂತಿದ್ದ ಬಸ್ಗಳು ನಿಧಾನವಾಗಿ ಸರ್ವೀಸ್ ಸ್ಟೇಷನ್ಗಳತ್ತ ಬರುತ್ತಿವೆ. ಈ ಬಸ್ಗಳು ತಪಾಸಣೆಗೆ ಒಳಗಾಗುತ್ತಿದ್ದು, ಶೇ. 30ರಷ್ಟು ಬಸ್ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ. ಅದನ್ನು ಘಟಕದಲ್ಲೇ ಸರಿಪಡಿಸಲಾಗುತ್ತಿದೆ. ಕೆಲ ಬಸ್ಗಳು ಮಾರ್ಗ ಮಧ್ಯೆ ನಿಲ್ಲಬಹುದು. ಬೇರೆ ಬಸ್ ಬದಲಿಸಲು ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಸಮಸ್ಯೆ ಇರುವುದು ಐಷಾರಾಮಿ ಹವಾನಿಯಂತ್ರಿತ ಬಸ್ಗಳ ವಿಚಾರದಲ್ಲಿ. ಇವು ವಿದೇಶಿ ತಂತ್ರಜ್ಞಾನ ಒಳಗೊಂಡಿದ್ದು, ಸ್ವದೇಶಿ ವಾತಾವರಣಕ್ಕೆ ಬಹುಬೇಗ ಸಮಸ್ಯೆಗೆ ಒಳಗಾಗುತ್ತವೆ. ಅಲ್ಲದೇ ಕೆಲ ದಿನ ಬಳಸದೇ ಬಿಟ್ಟರೆ ಇವುಗಳು ಎದುರಿಸುವ ಸಮಸ್ಯೆ ಏನು ಎನ್ನುವುದು ಇದುವರೆಗೂ ಗೊತ್ತಿಲ್ಲ. ಬಳಸುತ್ತಿರುವಾಗ ಎದುರಾಗುವ ಸಮಸ್ಯೆಗೆ ಇಲ್ಲಿನ ಮೆಕ್ಯಾನಿಕ್ ವಿಭಾಗದ ಸಿಬ್ಬಂದಿಗೆ ವಿದೇಶಿ ಬಸ್ ತಯಾರಿಕಾ ಸಂಸ್ಥೆಯವರು ತರಬೇತಿ ನೀಡಿದ್ದಾರೆ. ಸುಮ್ಮನೆ ತಿಂಗಳುಗಳ ಕಾಲ ನಿಂತಾಗ ಎದುರಾಗುವ ಸಮಸ್ಯೆ ಹೇಗೆ ಸರಿಪಡಿಸಿಕೊಳ್ಳಬೇಕೆಂಬ ತಜ್ಞತೆ ಇಲ್ಲಿಯವರಿಗೆ ಇನ್ನೂ ಸಿಕ್ಕಿಲ್ಲ.
ಹೀಗಿರುವಾಗ ವಿದೇಶದಿಂದ ಆಮದು ಮಾಡಿಕೊಂಡಿರುವ ಬಹುತೇಕ ಐಷಾರಾಮಿ ಬಸ್ಗಳ ಕಥೆ ಏನು ಎನ್ನುವುದು ಇದೀಗ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ತಲೆಬಿಸಿಯಾಗಿದೆ. ಹೊರ ದೇಶದ ತಂತ್ರಜ್ಞರನ್ನು ಕರೆಸಿಕೊಳ್ಳಲು ಸಾಧ್ಯವಿಲ್ಲ. ಬಹುತೇಕ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಐಷಾರಾಮಿ ಬಸ್ಗಳ ಸಂಚಾರಕ್ಕೆ ಸದ್ಯ ಅವಕಾಶ ಸಿಗುವುದು ಕಷ್ಟ. ಇನ್ನೊಂದು ತಿಂಗಳಲ್ಲಿ ಕೊರೊನಾ ಅಟ್ಟಹಾಸ ಕಡಿಮೆ ಆದರೆ ಆಗ ಐಷಾರಾಮಿ ಬಸ್ಗಳ ಸಂಚಾರ ಆರಂಭವಾಗಬಹುದು. ಯಾವುದೇ ಸಂದರ್ಭದಲ್ಲಿ ಸಂಚಾರ ಆರಂಭವಾದರೂ ಸಜ್ಜಾಗಿ ನಿಲ್ಲುವ ಸಾಮರ್ಥ್ಯವಂತೂ ಸದ್ಯಕ್ಕೆ ಈ ಬಸ್ಗಳಿಗೆ ಇಲ್ಲ. ಸಾಮಾನ್ಯ ಬಸ್ಗಳೇ ಶೇ. 30ರಿಂದ 35ರಷ್ಟು ಸಮಸ್ಯೆಗೆ ಒಳಗಾಗುತ್ತಿವೆ. ಹೀಗಿರುವಾಗ ಅತ್ಯಂತ ಸೂಕ್ಷ್ಮ ಹಾಗೂ ದುಬಾರಿ ಬೆಲೆಯದ್ದಾಗಿರುವ ಐಷಾರಾಮಿ ಬಸ್ಗಳನ್ನು ಸರಳವಾಗಿ ರಿಪೇರಿ ಮಾಡುವುದು, ನಿಭಾಯಿಸುವುದು ಬಹಳ ಕಷ್ಟ. ಆದ್ದರಿಂದ ಹೈಟೆಕ್ ವಾಹನಗಳಿಗೆ ಎದುರಾಗುವ ಸಮಸ್ಯೆ ಬಗ್ಗೆ ಸಾರಿಗೆ ನಿಗಮ ದೊಡ್ಡ ಮಟ್ಟದಲ್ಲಿ ತಲೆ ಬಿಸಿ ಮಾಡಿಕೊಂಡಿದೆ.
ಕೆಎಸ್ಆರ್ಟಿಸಿ ಮೆಕ್ಯಾನಿಕ್ ವಿಭಾಗದ ನಿವೃತ್ತ ಅಧಿಕಾರಿಯೊಬ್ಬರು, ವೋಲ್ವೊ ಬಸ್ ನಮ್ಮವರು ಕೊಂಡು ತಂದಾಗ ಕಂಪನಿ ಕಡೆಯಿಂದ ಕೆಲ ತಜ್ಞರು ಆಗಮಿಸಿ ತರಬೇತಿ ನೀಡಿದ್ದರು. ತರಬೇತಿ ಪಡೆದವರಲ್ಲಿ ಕೆಲವರು ನಿವೃತ್ತರಾಗಿದ್ದಾರೆ, ಮತ್ತೆ ಕೆಲವರು ವರ್ಗಾವಣೆಯಾಗಿ ಹೋಗಿದ್ದಾರೆ. ಇದೀಗ ಕೊರೊನಾದಿಂದಾಗಿ ದಿಢೀರ್ ಎದುರಾಗಿರುವ ಸಮಸ್ಯೆಗೆ ತಕ್ಷಣ ಪರಿಹಾರ ಬೇಕಾಗಿದೆ. ಬಸ್ ಸಂಚಾರ ಆರಂಭವಾದರೆ ತಕ್ಷಣ ಬಸ್ಗಳನ್ನು ಸಿದ್ಧಪಡಿಸಬೇಕು. ಅಷ್ಟು ಸಂಖ್ಯೆಯ ನುರಿತ ಮೆಕ್ಯಾನಿಕ್ಗಳು ನಮ್ಮಲ್ಲಿ ಇಲ್ಲ. ಆದರೂ ನಮ್ಮ ಪ್ರಯತ್ನ ಶಕ್ತಿ ಮೀರಿ ಮಾಡುತ್ತಿದ್ದೇವೆ. ಸಾಮಾನ್ಯವಾಗಿ ದೇಶೀಯ ನಿರ್ಮಿತ ಬಸ್ಗಳನ್ನು ರಿಪೇರಿ ಮಾಡುವುದು ಕಷ್ಟದ ಕೆಲಸವಲ್ಲ. ಆದರೆ ವಿದೇಶದಿಂದ ತರಿಸಿಕೊಂಡ ಐಷಾರಾಮಿ ಬಸ್ ಸಿದ್ಧಪಡಿಸುವುದು ನಿಜಕ್ಕೂ ಕಷ್ಟದ ಕೆಲಸವಾಗಲಿದೆ. ಸಂಸ್ಥೆ ಇದಕ್ಕೆಲ್ಲಾ ಸಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ವಿವರಿಸಿದ್ದಾರೆ.