ಬೆಂಗಳೂರು: ಕೋವಿಡ್ ಎಲ್ಲಾ ವಿಭಾಗದ ಜನತೆಗೂ ಕಹಿ ಅನುಭವ ನೀಡಿದೆ. ಆದರೆ, ಮೊದಲೇ ಸಂಕಷ್ಟದಲ್ಲಿದ್ದ ವಿಶೇಷಚೇತನ ಮಕ್ಕಳಿಗೆ ಕೊರೊನಾ ಇನ್ನಷ್ಟು ಸವಾಲೆಸೆದಿದೆ. ಶಾಲೆಗಳು ಬಂದ್ ಆಗಿ ವಿದ್ಯಾಗಮ ಹಾಗೂ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಆದರೆ, ಹಳ್ಳಿ ಪ್ರದೇಶದ ಅಂಧ ಮಕ್ಕಳಿಗೆ ಈ ಸವಲತ್ತು ಮರೀಚಿಕೆಯಾಗಿದ್ದು, ಶೇಕಡಾ 10ರಷ್ಟು ವಿದ್ಯಾರ್ಥಿಗಳು ಮಾತ್ರ ಸಿಕ್ಕ ಸೌಲಭ್ಯ ಸದುಪಯೋಗಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ...ಸಹೋದರಿಯರ ಸವಾಲ್: ಅಕ್ಕನಿಗೆ ಸೋಲುಣಿಸಿದ ತಂಗಿ!
ಅಂಧ ವಿದ್ಯಾರ್ಥಿಗಳಿಗೆ 2014ರಿಂದ ಜಾರಿಯಲ್ಲಿರುವ ಲ್ಯಾಪ್ಟಾಪ್ ವಿತರಣೆ ಯೋಜನೆಯೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಇದರಿಂದ ಉತ್ತಮ ಹುದ್ದೆಗಳ ಕನಸನ್ನಿಟ್ಟುಕೊಂಡು ಪದವಿ ಶಿಕ್ಷಣ ಪಡೆಯುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಹೆಚ್ಚು ಹಿನ್ನಡೆಯಾಗುತ್ತಿದೆ. ಅಂಗವಿಕಲ ಮತ್ತು ಹಿರಿಯ ನಾಗರಿಕರ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಕೂಡ ಈ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ.
ವಿಶೇಷ ಚೇತನ ಮಕ್ಕಳ ವಿದ್ಯಾಭ್ಯಾಸ ಕಿತ್ತುಕೊಂಡ ಕೋವಿಡ್ ಈ ಬಗ್ಗೆ ಇಲಾಖೆಯ ನಿರ್ದೇಶಕ ಮುನಿರಾಜು ಅವರನ್ನು ಕೇಳಿದ್ರೆ, ಎಲ್ಲರಿಗೂ ಆನ್ಲೈನ್ ಶಿಕ್ಷಣ ಲಭ್ಯವಿದೆ. ಇಲಾಖೆಗೆ ಹೊಸದಾಗಿ ಬಂದಿರುವ ಕಾರಣ ಹೆಚ್ಚಿನ ಮಾಹಿತಿ ಇಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ. ನಗರ ಪ್ರದೇಶದ ಹಾಗೂ ಆರ್ಥಿಕವಾಗಿ ಸಬಲರಾಗಿರುವ ಕುಟುಂಬಗಳ ಮಕ್ಕಳು ಮಾತ್ರ ಸ್ಮಾರ್ಟ್ಫೋನ್, ಟ್ಯಾಬ್ ಅಥವಾ ಲ್ಯಾಪ್ಟಾಪ್ಗಳ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಈ ಮೂಲಕ ಅಂಧ ವಿದ್ಯಾರ್ಥಿಗಳಲ್ಲಿ ಶೇ.10ರಷ್ಟು ಮಕ್ಕಳಿಗೆ ಮಾತ್ರ ಶಿಕ್ಷಣ ದೊರೆತಿದ್ದು, ಉಳಿದ ಶೇ.90ರಷ್ಟು ವಿದ್ಯಾರ್ಥಿಗಳು ಅದರಿಂದ ದೂರವಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಡುವೆ ಅಂಧ ವಿದ್ಯಾರ್ಥಿಗಳು ಟಿವಿ ಮತ್ತು ರೇಡಿಯೋ ಮೂಲಕ ಕೊಂಚ ಮಟ್ಟಿಗೆ ವಿದ್ಯಾಭ್ಯಾಸ ಪಡೆದುಕೊಂಡಿದ್ದಾರೆ. ಆದರೆ, ಹೇಳಿಕೊಳ್ಳುವಷ್ಟಿಲ್ಲ. ತಿಲಕ್ ನಗರದ ಅಂಧ ವಿದ್ಯಾರ್ಥಿ ಶಾಲೆಯು ಮಹಾರಾಜರು ಕಟ್ಟಿಸಿದ ಶಾಲೆಯಾಗಿದೆ. ದೇಶದಲ್ಲೇ ಉತ್ತಮ ಅಂಧ ಶಾಲೆಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿದ್ದ ಈ ಶಾಲೆ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಎದುರಿಸಿತು.