ಬೆಂಗಳೂರು:ಎಸ್ಕಾಂಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಇದೀಗ ಕೇಂದ್ರ ಸರ್ಕಾರ ಕೊಡಮಾಡುವ ಅನುದಾನದ ಮೇಲೆ ಕಣ್ಣಿಟ್ಟಿದೆ. ಆ ಮೂಲಕ ಸೊರಗಿರುವ ಎಸ್ಕಾಂಗಳ ಕಾರ್ಯದಕ್ಷತೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಆದರೆ ಆ ಅನುದಾನ ಗಿಟ್ಟಿಸಿಕೊಳ್ಳುವ ಮಾರ್ಗವೇ ರಾಜ್ಯ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ರಾಜ್ಯದ ಎಸ್ಕಾಂಗಳು, ವಿದ್ಯುತ್ ಪ್ರಸರಣ ನಿಗಮಗಳ ಕಾರ್ಯಕ್ಷಮತೆ ವರ್ಷ ವರ್ಷ ಕುಸಿತ ಕಾಣುತ್ತಿದೆ. ಕೋಟ್ಯಂತರ ರೂ. ಬಾಕಿ ಹಣದ ಮೂಲಕ ಎಸ್ಕಾಂಗಳ ಕಾರ್ಯದಕ್ಷತೆ ಪಾತಾಳಕ್ಕೆ ಇಳಿದಿದೆ. ವಿವಿಧ ಮೂಲಗಳಿಂದ ವಿದ್ಯುತ್ ಬಿಲ್ಗಳು ಎಸ್ಕಾಂಗಳಿಗೆ ಪಾವತಿಯಾಗದೇ ಹಲವು ವರ್ಷದಿಂದ ಬೃಹತ್ ಪ್ರಮಾಣದಲ್ಲಿ ಬಾಕಿ ಮೊತ್ತ ಉಳಿದುಕೊಂಡಿದೆ. ಗ್ರಾಮ ಪಂಚಾಯತಿಗಳಿಂದ, ಸಣ್ಣ ನೀರಾವರಿ, ಜಲಸಂಪನ್ಮೂಲ ಇಲಾಖೆ, ಸರ್ಕಾರದ ವಿವಿಧ ಇಲಾಖೆಗಳಿಂದ ಎಸ್ಕಾಂಗಳಿಗೆ ಬೃಹತ್ ಪ್ರಮಾಣದ ಬಿಲ್ ಬಾಕಿ ಉಳಿದುಕೊಂಡಿದೆ. ಇದರಿಂದ ಎಸ್ಕಾಂ, ಪ್ರಸರಣಾ ನಿಗಮದ ಕಾರ್ಯಕ್ಷಮತೆ ದುಸ್ತರವಾಗಿದೆ. ಆರ್ಥಿಕವಾಗಿ ಸೊರಗಿರುವ ಎಸ್ಕಾಂಗಳ ಕಾರ್ಯನಿರ್ವಹಣೆ ಬಡಕಲಾಗಿದೆ.
ಈ ಸಂಬಂಧ ಎಸ್ಕಾಂಗಳ ಕಾರ್ಯಕ್ಷಮತೆ, ಬಲವರ್ಧನೆಗೆ ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಇದೀಗ ವಿದ್ಯುತ್ ವಿತರಣಾ ವಲಯ ಬಲವರ್ಧನೆ (ಆರ್‌ಡಿಎಸ್‌ಎಸ್) ಯೋಜನೆಯಡಿ ಕೇಂದ್ರದಿಂದ ಅಂದಾಜು 8,000 ಕೋಟಿ ರೂ.ಗಳ ನೆರವಿನತ್ತ ರಾಜ್ಯ ಸರ್ಕಾರ ಕಣ್ಣು ಇಟ್ಟಿದೆ. ಆ ಮೂಲಕ ಎಸ್ಕಾಂಗಳ ಪುನಶ್ಚೇತನದ ಇರಾದೆ ಹೊಂದಿದೆ. ಆದರೆ, ಈ ಅನುದಾನ ಗಿಟ್ಟಿಸಿಕೊಳ್ಳುವುದೇ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ರಾಜ್ಯ ಸರ್ಕಾರದ ಮುಂದಿರುವ ಕಗ್ಗಂಟು ಏನು?:ಕೇಂದ್ರದ ಆ ಅನುದಾನ ಪಡೆಯಲು ರಾಜ್ಯ ಸರ್ಕಾರ ವಿದ್ಯುತ್ ಸಾಗಣೆ, ವಿತರಣೆಯಲ್ಲಿ ಕಾರ್ಯಕ್ಷಮತೆ ಹಾಗೂ ಆರ್ಥಿಕತೆಯಲ್ಲಿ ದಕ್ಷತೆ ಹೆಚ್ಚಿಸುವುದಕ್ಕೆ ಆದ್ಯತೆ ನೀಡಬೇಕಾಗಿದೆ. ಅನುದಾನ ಪಡೆಯಲು ಕೇಂದ್ರ ಸರ್ಕಾರ ಕೆಲ ಕಠಿಣ ಷರತ್ತು ವಿಧಿಸಿದೆ. ಎಸ್ಕಾಂಗಳು ಹಾಗೂ ಪ್ರಸರಣಾ ನಿಗಮದ ಕೋಟ್ಯಂತರ ರೂ. ಬಾಕಿ ಹೊರೆ ಇಳಿಸುವ ಅನಿವಾರ್ಯತೆಯಲ್ಲಿದೆ. ಆದರೆ, ಈ ಗುರಿ ಮುಟ್ಟುವುದೇ ಅಕ್ಷರಶಃ ಅಸಾಧ್ಯ ಎಂಬಂತಾಗಿದೆ.
ವಿವಿಧ ಸರ್ಕಾರಿ ಇಲಾಖೆಗಳು, ಸಹಾಯಧನ ಮೊತ್ತವೂ ಒಳಗೊಂಡು ಎಸ್ಕಾಂ ಹಾಗೂ ಪ್ರಸರಣ ನಿಗಮದಲ್ಲಿ ಸುಮಾರು 21,000 ಕೋಟಿ ರೂ. ಬಾಕಿ ಹೊರೆ ಇದೆ. ವರ್ಷಗಳಿಂದ ಮುಂದುವರೆದುಕೊಂಡು ಬಂದಿರುವ ಈ ಬೆಟ್ಟದ ಗಾತ್ರಕ್ಕೆ ಬೆಳೆದಿರುವ ಬಾಕಿ ಹೊರೆ ಇಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಗ್ರಾಮ ಪಂಚಾಯತಿಗಳಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಅಕ್ಟೋಬರ್-2021ರ ಅಂತ್ಯದವರೆಗೆ ಅಸಲು ಮೊತ್ತ 3,518.05 ಕೋಟಿ ರೂ. ಮತ್ತು ಬರೀ ಮೊತ್ತ 711.55 ಕೋಟಿ ರೂ. ಕೋಟಿಗಳನ್ನು ಸೇರಿ ಒಟ್ಟು ಮೊತ್ತ 4,229.60 ಕೋಟಿಗಳನ್ನು ಪಾವತಿಸಲು ಬಾಕಿ ಇದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ