ಬೆಂಗಳೂರು:ಕೇಂದ್ರದ ಬಿಜೆಪಿ ಸರ್ಕಾರದ ನೂತನ ಶಿಕ್ಷಣ ನೀತಿ ದೇಶದ ಶೈಕ್ಷಣಿಕ ಕ್ಷೇತ್ರವನ್ನೇ ಹಳ್ಳ ಹಿಡಿಸಲಿದ್ದು, ಇದರ ಉದ್ದೇಶ ಮೇಕ್ ಇನ್ ಇಂಡಿಯಾ ಅಲ್ಲ, ಬದಲಿಗೆ ಮೇಕ್ ಇನ್ ಅಮೆರಿಕ ಎಂಬಂತಾಗಿದೆ. ಈ ನೀತಿಯೂ ಡಿಜಿಟಲ್ ವಿಭಜನೆಯಿಂದ ಶ್ರೀಮಂತರು ಹಾಗೂ ಬಡವರ ನಡುವಣ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದ್ದು, ಇದು ವಿಭಜಕ ಶಿಕ್ಷಣ ನೀತಿಯಾಗಿದೆ ಎಂದು ಕೆಪಿಸಿಸಿ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪ್ರೊ.ಕೆ.ಈ.ರಾಧಾಕೃಷ್ಣ ಹೇಳಿದರು.
ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಅಪಾಯಕಾರಿ ಅಂಶಗಳಿದ್ದು, ಇದು ಒಂದು ಮೋಸ ಎಂದು ಕರೆಯಬಹುದು. ಕಾರಣ ದೇಶದಲ್ಲಿ ಶೇ.47ರಷ್ಟು ಮಂದಿ ಆಂತರಿಕ ವಲಸಿಗರಾಗಿದ್ದು, ಕೋವಿಡ್ ಸಮಯದಲ್ಲಿ 23 ಕೋಟಿ ಜನರು ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಟ್ಟಿದ್ದಾರೆ.
ಈ ಕುಟುಂಬದ ಮಕ್ಕಳನ್ನು ಈ ನೂತನ ಶಿಕ್ಷಣ ನೀತಿಯಲ್ಲಿ ನಿರ್ಲಕ್ಷಿಸಲಾಗಿದೆ. ಆನ್ಲೈನ್ ಶಿಕ್ಷಣ ಎನ್ನುವ ಬಿಜೆಪಿ ಸರ್ಕಾರ ಅದಕ್ಕೆ ಪೂರಕವಾಗಿ ಆಫ್ಲೈನ್ ಶಿಕ್ಷಣ ವ್ಯವಸ್ಥೆ ನೀಡಲು ಗಮನಹರಿಸಿಲ್ಲ. ಇನ್ನು ಡಿಜಿಟಲ್ ವಿಭಜನೆ ಹೆಚ್ಚಾಗಿದ್ದು, ಇದೊಂದು ವಿಭಜಕ ಶಿಕ್ಷಣ ನೀತಿಯಾಗಿದೆ ಎಂದು ಟೀಕಿಸಿದರು.
ಅಧ್ಯಾಪಕರ ಕೊರತೆ:
ದೇಶದಲ್ಲಿ ಅಧ್ಯಾಪಕರ ಕೊರತೆ ಹೆಚ್ಚಾಗಿದೆ. 2015ರ ವೇಳೆಗೆ ಸಾಕ್ಷರತೆ ಮತ್ತು ಗಣಿತಜ್ಞಾನ ಹೆಚ್ಚುಸುತ್ತೇವೆ ಎನ್ನುವ ಪ್ರಧಾನಿಗಳು ತಮ್ಮ 7 ವರ್ಷದ ಆಡಳಿತ ಅವಧಿಯಲ್ಲಿ ಶಿಕ್ಷಣ ವ್ಯವಸ್ಥೆ ಎಷ್ಟು ಪ್ರಮಾಣದಲ್ಲಿ ಕುಸಿದಿದೆ ಎಂಬುದನ್ನು ಅರಿತಿಲ್ಲ. ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣದಲ್ಲಿ ಶೇ.50 ರಷ್ಟು ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ನೀಡುವುದಾಗಿ ಹೇಳುತ್ತಾರೆ.
ಆದರೆ, ಈ ವಿಚಾರವಾಗಿ ಯಾವುದೇ ಪ್ರಾಥಮಿಕ ಪ್ರಯತ್ನವನ್ನು ಮಾಡಿಲ್ಲ. ದೇಶದಲ್ಲಿನ ಐಐಟಿ ಸಂಸ್ಥೆಗಳ ದುಃಸ್ಥಿತಿ ಬಗ್ಗೆ ಪ್ರಧಾನಮಂತ್ರಿಗಳು ಮನ್ ಕಿ ಬಾತ್ನಲ್ಲಿ ಮಾತನಾಡುವುದಿಲ್ಲ. ಇನ್ನು ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಶೇ.60ರಷ್ಟು ಅಧ್ಯಾಪಕರು ಅತಿಥಿ ಉಪನ್ಯಾಸಕರಾಗಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕರ ತರಬೇತಿಗೆ ಯಾವ ಸಮಗ್ರ ಯೋಜನೆ ಹಾಕಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ವಿವಿಗಳು ಕಲಿಕಾ ಕಾಲೇಜುಗಳಾಗಬಾರದು:
ಇನ್ನು ವಿಶ್ವವಿದ್ಯಾಲಯಗಳನ್ನು ಸಂಶೋಧನಾ, ಸ್ವಾಯತ್ತ ಹಾಗೂ ಕಲಿಕಾ ವಿಶ್ವವಿದ್ಯಾಲಯ ಎಂದು ವಿಂಗಡನೆ ಮಾಡುವ ಕ್ರಮ ಹಾಸ್ಯಾಸ್ಪದ. ವಿಶ್ವವಿದ್ಯಾಲಯ ಎಂದರೆ ಸಂಶೋಧನೆ ಹಾಗೂ ಕಲಿಕೆಯ ಕೇಂದ್ರ. ಸಂಶೋಧನೆಯನ್ನು ವಿಶ್ವವಿದ್ಯಾಲಯಗಳಿಂದ ಪ್ರತ್ಯೇಕ ಮಾಡಿದರೆ ಅದು ವಿಶ್ವವಿದ್ಯಾಲಯವಾಗುವುದಿಲ್ಲ.