ಬೆಂಗಳೂರು :ಬಿಜೆಪಿ ಜೊತೆಗೆ ಕಾಂಗ್ರೆಸ್ ಸಖ್ಯ ಹೊಂದಿದ್ದು, ರಾಜ್ಯದಲ್ಲಿ ಕೋಮುವಾದ ನಿಗ್ರಹಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ಟೇನ್ ವಿಚಾರವಾಗಿ ಪ್ರತಿಭಟನೆ, ಹೋರಾಟ ಹಾಗೂ ವಿಚಾರಸಂಕಿರಣಗಳನ್ನು ಹಮ್ಮಿಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಗತಿಪರ ಬರಹಗಾರರು, ಸಾಹಿತಿಗಳು, ಹೋರಾಟಗಾರರು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಆನ್ ಲೈನ್ ಪಿಟಿಷನ್ ಅಭಿಯಾನ ಕೈಗೊಂಡಿದ್ದಾರೆ.
ಈ ಸಂಬಂಧ Change.org ವೇದಿಕೆಯಲ್ಲಿ ಆನ್‌ಲೈನ್ ಪಿಟಿಷನ್ ಅಭಿಯಾನ ಆರಂಭಿಸಲಾಗಿದ್ದು, ಈ ಮೂಲಕ ಸೋನಿಯಾ ಗಾಂಧಿಗೆ ಮನವಿ ಮಾಡಲಾಗಿದೆ. ನ.2 ರಂದು ಆನ್‌ಲೈನ್ ಪಿಟಿಷನ್ ಆರಂಭಿಸಲಾಗಿದ್ದು, ಶುಕ್ರವಾರದವರೆಗೆ ಸುಮಾರು 433 ಸಾಹಿತಿ, ಬರಹಗಾರರು ಹಾಗೂ ಹೋರಾಟಗಾರರು ಸಹಿ ಹಾಕಿದ್ದಾರೆ.
ಆನ್‌ಲೈನ್ ಪಿಟಿಷನ್ನಲ್ಲಿ ಏನಿದೆ ?:ಇಸ್ರೇಲ್- ಪ್ಯಾಲೆಸ್ಟೇನ್ ಯುದ್ಧದಲ್ಲಿ ಅಮಾಯಕ ನಾಗರೀಕರ ಸಾವು ಸಂಬಂಧ ಬೆಂಗಳೂರು, ರಾಜ್ಯದಲ್ಲಿ ಪ್ರತಿಭಟನೆ ನಡೆಸುವುದನ್ನು ರಾಜ್ಯ ಸರ್ಕಾರ ಹತ್ತಿಕ್ಕುತ್ತಿದೆ. ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲು ಮಾಡುತ್ತಿದ್ದಾರೆ. ವಿಚಾರ ಸಂಕಿರಣಗಳಿಗೆ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಒಂದು ಕಡೆಯಲ್ಲಿ ಕಾಂಗ್ರೆಸ್ ಪ್ಯಾಲೆಸ್ಟೈನ್ ಪರವಾಗಿ ನಿಲುವು ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಅಧಿನಾಯಕಿಯಾದ ಸೋನಿಯಾ ಗಾಂಧಿ ಇಂಗ್ಲಿಷ್ ದೈನಿಕದಲ್ಲಿ ‘ಮಾನವೀಯತೆ ಕಟಕಟೆಯಲ್ಲಿದೆ’ ಎಂಬ ತಲೆ ಬರಹದಲ್ಲಿ ಸುದೀರ್ಘ ಲೇಖನ ಬರೆದಿದ್ದಾರೆ. ಇದರಲ್ಲಿ ಪ್ಯಾಲೆಸ್ಟೈನ್- ಇಸ್ರೇಲ್ ಸಮಸ್ಯೆಯ ಪರಿಣಾಮ ಏನು?. ಎಂದು ವಿವರಿಸಿದ್ದು, ಲೇಖನದಲ್ಲಿ ಪ್ಯಾಲೆಸ್ಟೈನ್ ಪರವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ಯಾಲೆಸ್ಟೈನ್ ಪರವಾಗಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ಏಕೆ ದಾಖಲು ಮಾಡುತ್ತಿದೆ ಎಂದು ಪ್ರಶ್ನಿಸಲಾಗಿದೆ.