ಬೆಂಗಳೂರು :ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜಾತಿ ನಿಂದನೆ ಮಾಡಿರುವ ಆರೋಪ ಸಂಬಂಧ ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕನ್ನಡಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ನೀಡಿರುವ ದೂರಿನನ್ವಯ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆ ಶುಕ್ರವಾರ ಸಂಜೆ ಸಂಪಿಗೆಹಳ್ಳಿ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.
ಹಿಂದೂಪರ ಕಾರ್ಯಕರ್ತನಾಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಇತ್ತೀಚಿಗೆ ರೌಡಿಪಟ್ಟಿ ತೆರೆದು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ಪೊಲೀಸರು ಸಲ್ಲಿಸಿದ್ದ ಚಾರ್ಜ್ಶೀಟ್ ಆಧರಿಸಿ ಮಾಧ್ಯಮಗಳಲ್ಲಿ ವರದಿಯಾದದ್ದನ್ನು ಭೈರಪ್ಪ ಹರೀಶ್ ಕುಮಾರ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಬಿಡುಗಡೆಯಾದ ಬಳಿಕ ತಮ್ಮ ವಿರುದ್ಧ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪುನೀತ್ ಕೆರೆಹಳ್ಳಿ ತಮ್ಮನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ದೂರಿದ್ದರು.
ಅಕ್ಟೋಬರ್ 17 ಹಾಗೂ 18ರಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ವಿವಿಧ ಪೋಸ್ಟ್ ಮಾಡಿರುವ ಪುನೀತ್ ಕೆರೆಹಳ್ಳಿ ತಮ್ಮ ವಿರುದ್ಧ ಅವಾಚ್ಯವಾಗಿ ನಿಂದಿಸಿ, ತಮ್ಮ ಕುಟುಂಬ ಹಾಗೂ ಮಕ್ಕಳನ್ನು ಉದ್ದೇಶಿಸಿ ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗಾಡದಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹಾಗೂ ದಲಿತ ಸಮುದಾಯದವರಾದ ತಮ್ಮನ್ನು ಉದ್ದೇಶಿಸಿ ಜಾತಿನಿಂದನೆ ಮಾಡಲಾಗಿದೆ ಎಂದು ಭೈರಪ್ಪ ಹರೀಶ್ ಕುಮಾರ್ ತಮ್ಮ ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನನ್ವಯ ಪುನೀತ್ ಕೆರೆಹಳ್ಳಿ ವಿರುದ್ಧ ಜಾತಿ ನಿಂದನೆ, ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಆರೋಪದಡಿ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.