ಬೆಂಗಳೂರು: ಬಿ.ಎಲ್.ಸಂತೋಷ್ ಅವರಿಗೆ ಒಂದು ಸವಾಲು. ಒಂದು ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ. ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು. ಸರಣಿ ಟ್ವೀಟ್ ಮಾಡಿರುವ ಅವರು, ಇದೆಲ್ಲಕ್ಕೂ ಮಿಗಿಲಾಗಿ ಮತ್ತೊಂದು ಸವಾಲು. ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಲಿ. ಈ ಸವಾಲನ್ನು ಸ್ವೀಕರಿಸುವ ದಮ್ಮು, ತಾಕತ್ತು ಇದೆಯೇ? ಎಂದು ಟೀಕಿಸಿದ್ದಾರೆ.
ಬಿ.ಎಲ್.ಸಂತೋಷ್ ಹೇಳಿಕೆ ಸಂಬಂಧ ಸಚಿವ ದಿನೇಶ್ ಗಂಡೂರಾವ್ ಟ್ವೀಟ್ ಮಾಡಿ, ರಾಜ್ಯ ಬಿಜೆಪಿ ಈಗ ಒಡೆದ ಮನೆ. ಒಂದು ಕಡೆ ಬಣ ಜಗಳ, ಗುಂಪುಗಾರಿಕೆ. ಮತ್ತೊಂದು ಕಡೆ ವರಿಷ್ಠರ ಕೆಟ್ಟ ದೃಷ್ಟಿಯಿಂದ ಹೈರಾಣಾಗಿರುವ ಬಿಜೆಪಿ ರಚನಾತ್ಮಕ ಪ್ರತಿಪಕ್ಷವಾಗುವ ಯಾವುದೇ ಯೋಗ್ಯತೆಯನ್ನೂ ಉಳಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ಇಂತಹ ರಾಜ್ಯ ಬಿಜೆಪಿ ನಾಯಕರು ನಮ್ಮ ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾತಾಡುವುದು ವರ್ತಮಾನದ ಅತಿ ದೊಡ್ಡ ಕುಚೋದ್ಯ. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುವ ಬಗ್ಗೆ ಅವಕಾಶ ಸಿಕ್ಕಾಗಲೆಲ್ಲಾ ಮಾತನಾಡುತ್ತಿದ್ದರು. ದುರಂತವೆಂದರೆ, ಕೇಡು ಬಗೆದವರಿಗೆ ಕೇಡೇ ಉಂಟಾಗಲಿದೆ ಎಂಬಂತೆ ಕಾಂಗ್ರೆಸ್ ಮುಕ್ತ ಕನಸು ಕಂಡಿದ್ದ ಬಿಜೆಪಿಯೇ ಇಂದು ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ ಎಂದು ಟೀಕಿಸಿದರು. ಬಿಜೆಪಿಯ ಅವಸಾನದ ಪರ್ವ ಕರ್ನಾಟಕದಿಂದಲೇ ಆರಂಭವಾಗಿದೆ, ಮುಂದೆ ದೇಶವ್ಯಾಪಿಯಾಗುವುದು ಖಡಾಖಂಡಿತ.