ಬೆಂಗಳೂರು:ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ನಾ ನಾಯಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ನಾಯಕಿಯರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಪ್ರಿಯಾಂಕ ಗಾಂಧಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.
ದೇಶ ಕಟ್ಟೋಣ ಬನ್ನಿ:ಮಾಜಿ ಸಚಿವೆ ಹಾಗೂ ನಾ ನಾಯಕಿ ಕಾರ್ಯಕ್ರಮದ ಉಸ್ತುವಾರಿ ಉಮಾಶ್ರೀ ಮಾತನಾಡಿ, ದೇಶದಲ್ಲೇ ಪ್ರಥಮ ಬಾರಿಗೆ ನಾ ನಾಯಕಿ ಕಾರ್ಯಕ್ರಮವನ್ನು ಡಿಕೆ ಶಿವಕುಮಾರ್ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿದೆ. ನಮ್ಮಲ್ಲಿರುವ ಮಹಿಳಾ ಶಕ್ತಿಯನ್ನು ಮುಂದೆ ತರಲು ಹಾಗೂ ಸದುಪಯೋಗ ಮಾಡಿಕೊಳ್ಳಲು ಮತ್ತು ದೇಶ ಕಟ್ಟುವ ಶಕ್ತಿ ಮಹಿಳೆಯರಲ್ಲಿದೆ ಎಂಬುದನ್ನು ನಿರೂಪಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಲ್ಲಿ ಪಾಲ್ಗೊಂಡಿರುವ ಮಹಿಳೆಯರು ಪ್ರತಿಯೊಬ್ಬರು ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪ ತೊಡಬೇಕು. ಬೆಲೆ ಏರಿಕೆ, ಮಹಿಳಾ ದೌರ್ಜನ್ಯ ಸೇರಿದಂತೆ ಹಲವು ದೌರ್ಜನ್ಯಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಇದನ್ನು ಸರ್ಕಾರ ಪೋಷಿಸುತ್ತಿದೆ. ಇಂಥ ಸರ್ಕಾರವನ್ನು ಕಿತ್ತೊಗೆಯುವ ಕಾರ್ಯವನ್ನ ಇಲ್ಲಿ ಆಗಮಿಸಿರುವ ಪ್ರತಿಯೊಬ್ಬ ನಾಯಕಿಯರು ತಮ್ಮ ಊರುಗಳಿಗೆ ತೆರಳಿ ಮಾಡಬೇಕು. ತಮ್ಮ ತಮ್ಮ ಗ್ರಾಮಗಳಿಗೆ ತೆರಳಿ ಅಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು.
ಕಾಂಗ್ರೆಸ್ ಪಕ್ಷ ಬಡವರ ಪಕ್ಷ: ನೀವು ಮನಸ್ಸು ಮಾಡಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು. ಕಾಂಗ್ರೆಸ್ ಪಕ್ಷ ಬಡವರ ಪಕ್ಷವಾಗಿದ್ದು ಬಡವರಿಗಾಗಿ ಶ್ರಮಿಸುತ್ತಿದೆ. ಈ ಪಕ್ಷವನ್ನ ಅಧಿಕಾರದಿಂದ ಕಿತ್ತೊಗೆಯಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲ ಮಹಿಳೆಯರ ನೋವು ನಿಮ್ಮ ನೋವು ಹಾಗೂ ದೇಶದ ಮಹಿಳೆಯರ ನೋವು. ನಾವೆಲ್ಲ ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟೋಣ ಎಂದು ಮನವಿ ಮಾಡಿದರು.
ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೇಟ್ಟಾ ಡಿಸೋಜಾ ಮಾತನಾಡಿ, ಕರ್ನಾಟಕದ ಮಹಿಳಾ ನಾಯಕಿಯರಿಗೆ ನಾಯಕತ್ವ ವಹಿಸುವ ಶಕ್ತಿ ಇದೆ ಹಾಗೂ ಅವರು ನೇತೃತ್ವ ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂಬ ನಂಬಿಕೆ ಇದೆ. 1984ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರೇ ಸ್ವತಃ ಆಗಮಿಸಿ ಮಹಿಳಾ ಕಾಂಗ್ರೆಸ್ ಘಟಕವನ್ನು ಉದ್ಘಾಟಿಸಿದ್ದರು ಎಂಬ ಮಾಹಿತಿಯನ್ನು ಕೇಳಿ ತುಂಬಾ ಸಂತಸವಾಯಿತು. ಮತ್ತೊಮ್ಮೆ ಎಲ್ಲ ಮಹಿಳಾ ನಾಯಕಿಯರು ಒಗ್ಗೂಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ ಎಂದು ಕರೆಕೊಟ್ಟರು.
ಗಾಂಧಿ ಪರಿವಾರದ ಸಂಪರ್ಕ ಕರ್ನಾಟಕದ ಜೊತೆಗಿದೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಂಪೂರ್ಣ ಶಕ್ತಿ ಮಹಿಳೆಯರ ಮೇಲಿದೆ. ನೆಹರು ಹಾಗೂ ಗಾಂಧಿ ಪರಿವಾರದ ಸಂಪರ್ಕ ಕರ್ನಾಟಕದ ಜೊತೆಗಿದೆ. ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಇದೇ ರಾಜ್ಯದ ನೆಲದಿಂದ ಗೆದ್ದು ರಾಜಕೀಯ ಪ್ರತಿನಿಧಿಸಿದ್ದರು.
ರಾಜ್ಯದ ಮಹಿಳೆಯರು ಹಿಂದುಳಿದ ವರ್ಗದವರು ಬಡವರು ಯುವಕರು ಮಹಿಳೆಯರಲ್ಲಿ ಇವರ ಮೇಲೆ ಅಪಾರ ಗೌರವ ಇದೆ. ಬೆಲೆ ಏರಿಕೆ ಬಿಸಿಯಿಂದ ಮಹಿಳೆಯರು ತತ್ತರಿಸಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ನಾರಿ ಶಕ್ತಿಯ ನೇತೃತ್ವದಲ್ಲೇ ಅಧಿಕಾರಕ್ಕೆ ಬರುವ ಸಂಕಲ್ಪವನ್ನು ಮಹಿಳೆಯರು ತೊಡಬೇಕು. ಬಡತನ ಹಾಗೂ ಬೆಲೆ ಏರಿಕೆಯಿಂದ ಪೀಡನಿಗೆ ಒಳಗಾಗಿರುವ ಮಹಿಳೆಯರಿಗೆ ಇಂದು ಈ ವೇದಿಕೆ ಮೂಲಕ ಹೊಸದೊಂದು ಬೆಳಕು ಲಭಿಸಲಿದೆ ಎಂಬ ವಿಶ್ವಾಸ ಇದೆ ಎಂದರು.
ಹೆಣ್ಣು ಕುಟುಂಬದ ಕಣ್ಣು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಇದೊಂದು ಐತಿಹಾಸಿಕ ಸನ್ನಿವೇಶ. ರಾಜ್ಯದ ಮಹಿಳೆಯರಿಗೆ ಶಕ್ತಿ ತುಂಬಲು ಪ್ರಿಯಾಂಕ ಗಾಂಧಿ ಆಗಮಿಸಿದ್ದಾರೆ. ದೇಶದ ಅಭಿವೃದ್ಧಿಯ ಚುಕ್ಕಾಣಿ ಹಿಡಿಯಲಿರುವ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡುವ ವಿಶೇಷ ಶಕ್ತಿಯಾಗಿ ಪ್ರಿಯಾಂಕ ಗಾಂಧಿ ರೂಪುಗೊಂಡಿದ್ದಾರೆ. ಹೆಣ್ಣು ಕುಟುಂಬದ ಕಣ್ಣು, ದೇಶದ ಶಕ್ತಿ. ರಾಜ್ಯದಲ್ಲಿರುವ ಹಾಗೂ ದೇಶದಲ್ಲಿರುವ ಹೆಣ್ಣುಮಗಳಿಗೆ ಶಕ್ತಿ ತುಂಬಿದರೆ ಬದಲಾವಣೆ ಆಗಲಿದೆ. ಈ ಭೂಮಿಯ ಮೂಲಕವೇ ಆ ಬದಲಾವಣೆ ಆಗಲಿದೆ ಎಂಬ ವಿಶ್ವಾಸದ ನುಡಿ ನುಡಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಇದೊಂದು ರಾಜ್ಯ ಮಟ್ಟದ ಸಮಾವೇಶ. ಈ ಸಮಾವೇಶದ ಮೂಲಕ ರಾಜ್ಯದ ಮಹಿಳೆಯರಿಗೆ ಶಕ್ತಿ ತುಂಬಲು ಪ್ರಿಯಾಂಕ ಗಾಂಧಿ ಆಗಮಿಸಿದ್ದಾರೆ. ಪ್ರಿಯಾಂಕ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಬಿಜೆಪಿ ದೊಡ್ಡದೊಂದು ಜಾಹೀರಾತು ನೀಡಿದೆ. ಮಹಿಳೆಯರಿಗೆ ಅನೇಕ ಅಭಿವೃದ್ಧಿ ಕಾರ್ಯಕ್ರಮ ನೀಡುತ್ತೇವೆ ಮತ್ತು ಮಹಿಳಾ ಬಜೆಟ್ ಮಂಡಿಸುತ್ತೇವೆ ಎಂಬ ಮಾತನ್ನು ಆಡಿದ್ದಾರೆ.
ಬಿಜೆಪಿಯವರು ವಚನ ಭ್ರಷ್ಟರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಆಗಿದೆ ಇದುವರೆಗೂ ಮಹಿಳೆಯರಿಗಾಗಿ ಒಂದೇ ಒಂದು ಕಾರ್ಯಕ್ರಮವನ್ನೂ ಮಾಡಿಲ್ಲ. 2018ರ ಚುನಾವಣೆ ಸಂದರ್ಭದಲ್ಲಿ 21 ಭರವಸೆಯನ್ನು ಮಹಿಳೆಯರಿಗೆ ನೀಡಿದ್ದರು. ಇದರಲ್ಲಿ ಒಂದನ್ನೂ ಈಡೇರಿಸಿಲ್ಲ. ಇದೀಗ ನಾವು ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂಬ ಭರವಸೆ ನೀಡಿದ ಮೇಲೆ ಎಚ್ಚರಗೊಂಡಿದ್ದಾರೆ.
ಮಹಿಳೆಯರ ಪರವಾಗಿ ಪುಂಕಾನು ಪುಂಕವಾಗಿ ಭರವಸೆ ನೀಡಲು ಆರಂಭಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಬಿಜೆಪಿಯವರಷ್ಟು ವಚನಭ್ರಷ್ಟರು ಇಲ್ಲ. 2018ರಲ್ಲಿ ನೀಡಿದ ಭರವಸೆಗಳಲ್ಲಿ ಶೇಕಡ ಹತ್ತರಷ್ಟೂ ಈಡೇರಿಸಿಲ್ಲ. ಇಂದು ಮಹಿಳೆಯರ ಹಾಗೂ ಸಮಾಜದ ದಾರಿ ತಪ್ಪಿಸಲು ಸುಳ್ಳು ಭರವಸೆ ನೀಡುವ ಜಾಹೀರಾತು ನೀಡುತ್ತಿದ್ದಾರೆ. ರಾಜ್ಯದ ಜನರಿಗೆ ಬಿಜೆಪಿ ಮಹಿಳೆಯರ ಪರವಾಗಿ ಇಲ್ಲ ಎನ್ನುವ ಅರಿವಿದೆ.
ಶೇಕಡ 33ರಷ್ಟು ಮಹಿಳೆಯರಿಗೆ ಮೀಸಲಾತಿ: ಬಿಜೆಪಿ ಯಾವತ್ತೂ ಜನರ ಪರವಾಗಿ ಇರಲಿಲ್ಲ. ಮನಸ್ಮೃತಿ ಮೂಲಕ ಮಹಿಳೆಯರನ್ನ ದಮನ ಮಾಡಿದ ಇದೇ ಪಕ್ಷ ಇದೀಗ ಪೊಳ್ಳು ಭರವಸೆ ನೀಡುತ್ತಿದೆ. ಮಹಿಳೆಯರಿಗೆ ಮೀಸಲಾತಿ ಸಿಕ್ಕಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಶೇಕಡ 33 ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸುತ್ತೇವೆ. ಇಂದಿನ ಸಮಾವೇಶದಲ್ಲಿ ಪಾಲ್ಗೊಂಡಿರುವ ಮಹಿಳೆಯರು ಸಹ ಈ ಒತ್ತಾಯ ಮಾಡುವ ಸಂಕಲ್ಪ ತೊಡಬೇಕು ಎಂದರು.
ವೇದಿಕೆಯ ಮೇಲೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮರನಾಥ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವೆ ಮೊಟಮ್ಮ, ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೇಟ್ಟಾ ಡಿಸೋಜಾ, ಮಾಜಿ ಸಚಿವೆ ಉಮಾಶ್ರೀ, ಶಾಸಕಿ ಸೌಮ್ಯ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆ ಕೆಳಭಾಗದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಮಾಜಿ ಡಿಸಿಎಂ ಜಿ ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಮಾಜಿ ಸಚಿವರು ಶಾಸಕರು ಮಾಜಿ ಸಂಸದರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ಅಕೈ ಪದ್ಮಶಾಲಿ, ವೀಣಾ ಕಾಶಪ್ಪನವರ್, ವಾಸಂತಿ ಶಿವಣ್ಣ, ಭಾರತಿ ಶಂಕರ್ ಮತ್ತಿತರ ನಾಯಕಿಯರು ಮಾತನಾಡಿದರು.
ಇದನ್ನೂ ಓದಿ:ಯತ್ನಾಳ್ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮ : ಸಚಿವ ಅಶ್ವತ್ಥನಾರಾಯಣ