ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಖುರ್ಚಿಗಾಗಿ ಆರ್ಎಸ್ಎಸ್ನ ಕೈಗೊಂಬೆಯಾಗಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಅವರ ತಂದೆ ಎಸ್.ಆರ್ ಬೊಮ್ಮಾಯಿ ಹೀಗಿರಲಿಲ್ಲ. ಅವರು ವಿಶಾಲ ಮನಸ್ಥಿತಿ ಹೊಂದಿದ್ದರು. ಆದರೆ, ಸಿಎಂ ಆರ್‌ಎಸ್‌ಎಸ್ ತಾಳಕ್ಕೆ ಕುಣಿಯುತ್ತಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಮೂವರ ಹತ್ಯೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ.
ಗೃಹ ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಖಾಕಿ ಬಗ್ಗೆ ಭಯವೂ ಇಲ್ಲ, ಗೌರವವೂ ಇಲ್ಲ. ನಿನ್ನೆ ಸಿಎಂ, ಪ್ರವೀಣ್ ಸಂತಾಪಕ್ಕೆ ತೆರಳಿದ್ದರು. ಆಗ ಕೆಲವೇ ಘಂಟೆಗಳಲ್ಲಿ ಮತ್ತೊಂದು ಕೊಲೆಯಾಗುತ್ತೆ. ಇದರಲ್ಲಿ ಗುಪ್ತಚರ ಸಂಪೂರ್ಣ ವಿಫಲವಾಗಿದೆ. ಇದನ್ನು ನೋಡಿದರೆ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂಬ ಪ್ರಶ್ನೆ ಮೂಡುತ್ತೆ ಎಂದು ಟೀಕಿಸಿದರು.
ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು:ಸಿಎಂ, ಗೃಹ ಸಚಿವರು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಇವತ್ತು ಬಂಡವಾಳ ಹೂಡೋಕೆ ಯಾರು ಬರ್ತಾರೆ. ತೇಜಸ್ವಿ ಏನು ಹೇಳಿಕೆ ಕೊಡ್ತಾರೆ. ಒಬ್ಬ ಎಂಪಿ ಕಲ್ಲು ತೂರಾಟದ ಬಗ್ಗೆ ಮಾತನಾಡ್ತಾರೆ ಎಂದರೆ ಕಾನೂನು ಸುವ್ಯವಸ್ಥೆ ಇದ್ಯಾ?.
ನೀವು ಚಿಲ್ಲರೆ ರಾಜಕಾರಣಕ್ಕೆ ಹೀಗೆ ಮಾಡಬೇಡಿ. ಚುನಾವಣೆ ಹತ್ತಿರ ಬಂದಾಗ ವಿಷಬೀಜ ಬಿತ್ತಬೇಡಿ. ಇಷ್ಟೆಲ್ಲ ಆದರೂ ಏನು ಕ್ರಮ ಜರುಗಿಸಿದ್ದಾರೆ. ಪಿಎಫ್ಐ, ಎಸ್ಡಿಪಿಐ ಸಂಘಟನೆ ಯಾಕೆ ಬ್ಯಾನ್ ಮಾಡ್ತಿಲ್ಲ. ಅವಕ್ಕೆ ಫಂಡ್ ಮಾಡ್ತಿರೋರು ಯಾರು?. ಕಟೀಲರ ಕಾರನ್ನೇ ಅಲ್ಲಾಡಿಸಿದ್ದಾರೆ ಅಂದ್ರೆ ಏನು?. ಸಿಎಂ ಕುರ್ಚಿನೂ ಅಲುಗಾಡ್ತಿದೆ ಅಂತ ಅರ್ಥ ತಾನೇ?.
ಕಾನೂನು ಸುವ್ಯವಸ್ಥೆ ಕೈಮೀರುತ್ತಿದೆ. ಆದರೂ ಯೋಗಿ ಆದಿತ್ಯನಾಥ್ರ ಯುಪಿ ಮಾಡೆಲ್ ಬಗ್ಗೆ ಮಾತನಾಡುತ್ತಿದ್ದೀರಾ?. ಕುವೆಂಪು, ಬಸವಣ್ಣ ಮಾಡೆಲ್ ಎಲ್ಲಿ ಹೋಯ್ತು?. ಪರಿಸ್ಥಿತಿ ಕೈತಪ್ಪಿರುವ ಕಾರಣ ಯೋಗಿ ಮಾಡೆಲ್ ಕುರಿತು ಮಾತನಾಡುತ್ತಿದ್ದಾರೆ. ಗಟ್ಟಿಯಾದ ಗೃಹ ಸಚಿವರನ್ನ ಕೇಳುತ್ತಿರೋದು ಅವರದೇ ಪಕ್ಷದ ಯತ್ನಾಳ್ ಅಲ್ಲವಾ?. ಇವರಿಗೆ ಯಾಕೆ ಆರಗ ಜ್ಞಾನೇಂದ್ರರನ್ನು ಬದಲಾಯಿಸಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಸಂಸತ್ತಿನ ಉಭಯ ಸದನಗಳ ಕಲಾಪ ಸೋಮವಾರಕ್ಕೆ ಮುಂದೂಡಿಕೆ