ಬೆಂಗಳೂರು: ಪೊಲೀಸ್ ನೇಮಕದಲ್ಲಿ ಅಕ್ರಮ ಎಸಗಿದವರನ್ನು ಬಂಧಿಸುವ ಬದಲು ಪ್ರಶ್ನಿಸಿದ ನನಗೆ ನೋಟಿಸ್ ನೀಡುವುದು ಎಷ್ಟು ಸರಿ ಅಂತ ಮಾಜಿ ಸಚಿವ ಹಾಗೂ ಕಾಂಗ್ರೆಸ್ ವಕ್ತಾರ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನೀವೇನು ಕತ್ತೆ ಕಾಯ್ತಿದ್ದೀರಾ?, ಕಡ್ಲೆಪುರಿ ತಿನ್ನುತ್ತಿದ್ದೀರಾ? ಆರೋಪಿ ಮೇಲೆ ಯಾಕೆ ಎಫ್ಐಆರ್ ಮಾಡಿಲ್ಲ. ಇದರಲ್ಲಿ ಡಿಪಾರ್ಟ್ಮೆಂಟ್ ಶಾಮೀಲಾಗಿದೆ ಅಂದುಕೊಳ್ಳಬಹುದಾ? ಎಂದು ಪ್ರಶ್ನಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವವರು ಯಾರು? ಯಾಕೆ ಅವರನ್ನ ನೀವು ಇನ್ನೂ ವಿಚಾರಣೆಗೆ ಕರೆದಿಲ್ಲ. ನೇಮಕಾತಿ ಎಕ್ಸಿಕ್ಯೂಟಿವ್ ಹೆಡ್ ಹೋಂ ಮಿನಿಸ್ಟರ್. ಇಲ್ಲಿಯವರೆಗೆ ಯಾಕೆ ಅವರನ್ನ ವಿಚಾರಣೆಗೆ ಕರೆದಿಲ್ಲ. ನೇಮಕಾತಿ ಮಾಡುವವರನ್ನ ತನಿಖೆಗೆ ಯಾಕೆ ಒಳಪಡಿಸಿಲ್ಲ. ಗೃಹ ಸಚಿವರು ಆರೋಪಿ ಮನೆಗೆ ಹೋಗಿರ್ತಾರೆ. ದಿವ್ಯಾ ಹಾರಗಿ ಮನೆಗೆ ಹೋಗಿದ್ದಾರೆ. ಅವರ ಮನೆಯಲ್ಲಿ ಸನ್ಮಾನ ಮಾಡಿಸಿಕೊಂಡಿದ್ದಾರೆ. ಬಾದಾಮಿ, ಗೋಡಂಬಿ, ಕಿಸ್ಮಿಸ್ ತಿಂದು ಬರ್ತಾರೆ. ಯಾಕೆ ಗೃಹ ಸಚಿವರಿಗೆ ನೋಟಿಸ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಜ್ಞಾನ ಜ್ಯೋತಿ ತರಬೇತಿ ಸಂಸ್ಥೆ ಎಕ್ಸಾಂ ಸೆಂಟರ್ ಅಲ್ಲ. ಹಾಗಂತ ಕಲಬುರಗಿಯಲ್ಲಿ ಲೆಟರ್ ಕೊಟ್ಟಿದ್ದಾರೆ. ಸುನೀಲ್ ಕುಮಾರ್ ಪ್ರಿಯಾಂಕ್ ತನಿಖೆ ಮಾಡಿ ಅಂತಾರೆ. ಸ್ವಾಮಿ ಸುನೀಲ್ ಮೊದಲು ಗೃಹ ಸಚಿವರನ್ನ ತನಿಖೆಗೊಳಪಡಿಸಿ. ಗೃಹ ಸಚಿವರೇ ಆರೋಪಿ ಮನೆಗೆ ಹೋಗಿ ಬರ್ತಾರೆ. ಸಿಎಂ, ಗೃಹ ಸಚಿವರಿಗಿಂತ ನಾನು ಪ್ರಭಾವಿಯೇ? ನಾನು ಪ್ರಭಾವಿಯಾಗಿದ್ದಾರೆ ಅರೆಸ್ಟ್ ಮಾಡಿಸಿ. ದಿವ್ಯಾ ಹಾರಗಿ ಚಿಕ್ಕ ಚಿಕ್ಕ ಮೀನುಗಳಷ್ಟೇ. ಇವರು ಹಣ ಕಲೆಕ್ಟ್ ಮಾಡೋರು. ಅವರು ಕಲೆಕ್ಟ್ ಮಾಡಿದ್ದು ಎಲ್ಲಿಗೆ ಹೋಗುತ್ತೆ. ಅದು ಬೆಂಗಳೂರಿಗೆ ಬರುತ್ತೆ. ಅಧಿಕಾರಿಗಳಿಗೆ, ಇವರಿಗೆ ಹೊರಬರುತ್ತೆ. ಹಣ ಅಧಿಕಾರಿ, ಶಾಸಕರು, ಬಿಜೆಪಿ ಕಚೇರಿಗೂ ಹೋಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.