ಬೆಂಗಳೂರು: ಹೆಚ್ಚುತ್ತಿರುವ ಭಾರತದ ಅಗತ್ಯತೆಗಳು, ಬೇಡಿಕೆಗಳನ್ನು ಸರ್ಕಾರಗಳಿಂದ ಮಾತ್ರ ಈಡೇರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಖಾಸಗಿ ಪಾಲುದಾರರ ಪಾತ್ರವೂ ಅನಿವಾರ್ಯವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಮತ್ತು ಕಾಮರ್ಸ್ನ ಪ್ರತಿನಿಧಿಗಳೊಂದಿಗಿನ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್ ಎಲ್ಲಾ ಕ್ಷೇತ್ರಗಳಲ್ಲಿ ದಿಕ್ಕನ್ನು ಬದಲಿಸುವ ಗುರಿ ಹೊಂದಿದೆ. ಭಾರತದಲ್ಲಿ ವೃದ್ಧಿಸುತ್ತಿರುವ ಮಹಾತ್ವಾಕಾಂಕ್ಷೆಗಳನ್ನು ಈಡೇರಿಸುವುದು ಸರ್ಕಾರಗಳಿಗೆ ಮಾತ್ರ ಸಾಧ್ಯವಿಲ್ಲ.
ಅದರ ಈಡೇರಿಕೆಗೆ ಖಾಸಗಿ ಸಹಭಾಗಿತ್ವದ ಅಗತ್ಯತೆ ಕೂಡ ಇದೆ. ಖಾಸಗಿ ಸಹಭಾಗಿತ್ವ ಉತ್ತೇಜಿಸದೇ ಇದ್ದರೆ ಭಾರತ ಒಂದು ದೊಡ್ಡ ಅವಕಾಶವನ್ನು ಕಳೆದುಕೊಳ್ಳಲಿದೆ. ಖಾಸಗಿ ಕ್ಷೇತ್ರಗಳು ಭಾರತದ ಅಭಿವೃದ್ಧಿಯ ದಿಶೆ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಆ ಸಂದೇಶವನ್ನು ಈ ಸಾಲಿನ ಬಜೆಟ್ ನೀಡಿದೆ ಎಂದು ವಿವರಿಸಿದರು.
ಭಾರತ ಈಗ ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆ ಕಳುಹಿಸಿ ಕೊಡುತ್ತಿದೆ. ಭಾರತ ಏನು ಮಾಡಬಹುದು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ. ಇದು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಿಂದ ಸಾಧ್ಯವಾಯಿತು. ಈ ಕೇಂದ್ರ ಬಜೆಟ್ ದಶಕಗಳ ಕಾಲ ಅಭಿವೃದ್ಧಿ ದಾರಿ ತೋರಿಸಿ ಕೊಡಲಿದೆ.
ಮುಂದಿನ ದಿನಗಳಲ್ಲಿ ಆರ್ಥಿಕ ಚೇತರಿಕೆಗೆ ಹಿನ್ನೆಡೆಯಾಗದಂತೆ ವಿತ್ತೀಯ ಕೊರತೆಯನ್ನು ಸರಿ ದಾರಿಗೆ ತರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಅಭಿವೃದ್ಧಿ ಸುಸ್ಥಿರ ಹಾಗೂ ಅಡಚಣೆರಹಿತವಾಗಿರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ಟ್ಯಾಬ್ ನೀಡಿ :ಇದಕ್ಕೂ ಮುನ್ನ ಮಾತನಾಡಿದ ಮೋಹನದಾಸ್ ಪೈ, ಡಿಜಿಟಲ್ ಶಿಕ್ಷಣದಿಂದ ವಂಚಿತರಾಗಿರುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು. ಕೋವಿಡ್ ಬಳಿಕ ಸಮಾರು 60% ವಿದ್ಯಾರ್ಥಿಗಳು ಡಿಜಿಟಲ್ ಕ್ರಾಂತಿಯಿಂದ ವಂಚಿತರಾಗಿದ್ದಾರೆ.