ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿಗಿಂತ ಖಾಸಗಿ ಆಸ್ಪತ್ರೆಗಳ ಹಣದಾಹವೇ ಹೆಚ್ಚಾದಂತೆ ಕಾಣುತ್ತಿದೆ. ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವುದು ಮುಂದುವರೆದಿದೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲೂ, ಈಗಿನ ಎರಡನೇ ಅಲೆಯಲ್ಲೂ ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಲ್ಯಾಬ್ಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದು ವರದಿಯಾಗುತ್ತಲೇ ಇದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಡಿ ನೋಂದಾಯಿತ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿರುವ ದರಗಳಲ್ಲಿಯೇ ರೋಗಿಗಳಿಗೆ ಕೋವಿಡ್ ಚಿಕಿತ್ಸೆಯನ್ನು ನೀಡಬೇಕು. ಆದರೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಲಕ್ಷ-ಲಕ್ಷ ರೂಪಾಯಿ ಬಿಲ್ ಹಾಕುತ್ತಿರುವುದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದೆ. ಇದ್ರ ವಿರುದ್ಧ ಅದೆಷ್ಟೇ ಕ್ರಮ ಕೈಗೊಂಡರೂ ಕೂಡ ಅಕ್ರಮ ದಂಧೆಗೆ ಸಂಪೂರ್ಣ ಕಡಿವಾಣ ಬೀಳುತ್ತಿಲ್ಲ.
ಕಾರಣ ಕೇಳಿ ನೋಟಿಸ್ ಜಾರಿ:
ಕೋವಿಡ್-19 ಸಂಬಂಧ ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡದೇ ಹೆಚ್ಚುವರಿ ಹಣ ಪಾವತಿಸಿಕೊಂಡು ಚಿಕಿತ್ಸೆ ನೀಡುವುದು ಬೆಳಕಿಗೆ ಬಂದಿದೆ. ಈ ವಿಚಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗಮನಕ್ಕೆ ಬಂದಿದೆ. ಹೀಗಾಗಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ನಗರದ 12 ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಕೋವಿಡ್-19 ಚಿಕಿತ್ಸೆ ನೀಡುವಲ್ಲಿ ಸರ್ಕಾರದ ನಿಯಮ ಉಲ್ಲಂಘನೆ ಮಾಡಿವೆ. ಹಾಗಾಗಿ, ಈವರೆಗೆ ಕೋವಿಡ್ ಚಿಕಿತ್ಸೆಗಾಗಿ ಖಾಸಗಿಯಾಗಿ (direct admission) ದಾಖಲಾಗಿರುವ ರೋಗಿಗಳ ವಿವರ ಮತ್ತು ರೋಗಿಗಳಿಂದ ಭರಿಸಲಾದ ವೆಚ್ಚದ ವಿವರವನ್ನು ಇಲಾಖೆಗೆ ತಲುಪಿಸಲು ಸೂಚಿಸಲಾಗಿದೆ. ಒಂದು ವೇಳೆ ವರದಿ ಸಲ್ಲಿಸದೇ ಇದ್ದರೆ ಕೆಪಿಎಂಇ ಕಾಯ್ದೆ ಅಡಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಸರ್ಕಾರ ನಿಗಧಿ ಮಾಡಿರುವ ದರವೆಷ್ಟು?
ಕಳೆದ ವರ್ಷ ಜೂನ್ 23ರಂದು ಹೊರಡಿಸಿರುವ ಆದೇಶದ ಪ್ರಕಾರ, ಖಾಸಗಿ ಆಸ್ಪತ್ರೆಗೆ ನೇರವಾಗಿ ದಾಖಲಾಗುವ ಕೋವಿಡ್ ರೋಗಿಗಳಿಗೆ ಹಾಗೂ ಸರ್ಕಾರಿ ಆಸ್ಪತ್ರೆಯಿಂದ ರೆಫರ್ ಮೂಲಕ ಹೋಗುವ ರೋಗಿಗಳಿಗೆ ಪ್ರತ್ಯೇಕ ದರ ಇರಲಿದೆ. ಇದರಲ್ಲಿ ರೆಫರ್ ಮೂಲಕ ಹೋಗುವ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಇನ್ನು ನೇರವಾಗಿ ರೋಗಿಗಳು ಹೋಗಿ ದಾಖಲು ಆದರೆ ಅಂತಹವರಿಗೆ ಸರ್ಕಾರ ನಿಗಧಿ ಪಡಿಸಿರುವ ಶುಲ್ಕವನ್ನು ಆಸ್ಪತ್ರೆಗಳು ಪಡೆಯಬೇಕಿದೆ.