ಬೆಂಗಳೂರು: ಪೋಷಕರು ದಾಖಲಾತಿ ಶುಲ್ಕ ಕಟ್ಟುತ್ತಿಲ್ಲ, ಸರ್ಕಾರವೂ ಬಾಕಿಯಿರುವ ಆರ್ಟಿಇ ಶುಲ್ಕ ಮರುಪಾವತಿ ಮಾಡುತ್ತಿಲ್ಲ. ಶಿಕ್ಷಕರ ಬವಣೆ ನಿಲ್ಲುತ್ತಿಲ್ಲ. ನಮ್ಮ ಕಷ್ಟ ಯಾರಿಗೆ ಹೇಳೋಣಾ ಅಂತಿದ್ದಾರೆ ಖಾಸಗಿ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು.
ಕೊರನಾದಿಂದಾಗಿ ಶಾಲೆಗಳು ಇನ್ನೂ ಪುನರಾರಂಭವಾಗಿಲ್ಲ ಇದರಿಂದಾಗಿ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೀವನ ಹಾಗೂ ಭವಿಷ್ಯವೇ ಅತಂತ್ರಕ್ಕೆ ಸಿಲುಕಿದೆ. ಶಿಕ್ಷಕರು ಕೆಲಸವಿಲ್ಲದ ಕಾರಣ ಇದೀಗ ಬೇರೆ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ.
ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಈಗಾಗಲೇ ಆರ್ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪ್ರತಿ ವರ್ಷದ ಶುಲ್ಕವನ್ನ ಸರ್ಕಾರ ಭರಿಸಬೇಕು. ಆದರೆ ಕಳೆದ ಎರಡು ವರ್ಷದಿಂದ ಸರಿಯಾಗಿ ಶುಲ್ಕ ಪಾವತಿ ಮಾಡುತ್ತಿಲ್ಲ ಎಂದು ಖಾಸಗಿ ಅನುದಾನಿತ ಶಾಲೆಗಳ ಒಕ್ಕೂಟ ತನ್ನ ಅಳಲು ತೋಡಿಕೊಳ್ಳುತ್ತಿತ್ತು. ಇದಕ್ಕಾಗಿ ಕಳೆದ ಸೆಪ್ಟೆಂಬರ್ 24 ರಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.
ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಬವಣೆ ನೀಗಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಆರ್ಟಿಇ ಬಾಕಿ ಶುಲ್ಕವನ್ನು ಪಾವತಿಸಲು 2020-21 ನೇ ಸಾಲಿನ ಆಯವ್ಯಯದಲ್ಲಿ ನಿಗದಿಪಡಿಸಲಾಗಿದ್ದ ಅನುದಾನದಲ್ಲಿ ಬಾಕಿಯಿರುವ 275 ಕೋಟಿ ರೂಪಾಯಿಗಳನ್ನು ಮತ್ತು ಕಳೆದ ಸಾಲಿನ ಬಾಕಿ ಪಾವತಿಗೆ ಸಂಬಂಧಿಸಿದ 520 ಕೋಟಿ ರೂ.ಗಳನ್ನು ಈ ಸಾಲಿನ ಪೂರಕ ಅಂದಾಜಿನಲ್ಲಿ ಮಂಜೂರು ಮಾಡಬೇಕೆಂದು ಕೋರಿದ್ದರು. ಈ ನಿಟ್ಟಿನಲ್ಲಿ ಈಗಾಗಲೇ ಒಂದೇ ಕಂತಿನಲ್ಲಿ 275 ಕೋಟಿಗಳ ಅನುದಾನ ಬಿಡುಗಡೆ ಮಾಡಿದೆ.
ಇನ್ನು 137 ಕೋಟಿಯಷ್ಟು ಆರ್ಟಿಇ ಶುಲ್ಕ ಬಾಕಿ ಇದ್ದು, ಅದು ಬಿಡುಗಡೆಯಾಗಬೇಕಾದರೆ ಈಗ ಬಿಡುಗಡೆಯಾಗಿರುವ ಹಣ ಖರ್ಚು ಆಗಬೇಕು. ಈ ವರ್ಷಕ್ಕೆ ಯಾವುದೇ ಮೊತ್ತದ ಪ್ರಕ್ರಿಯೆ ಶುರುವಾಗಿಲ್ಲ. ಹೀಗಾಗಿ ಆರ್ಥಿಕವಾಗಿ ಕಷ್ಟವಾಗಿದೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಬಜೆಟ್ ಶಾಲೆಗಳ ಸ್ಥಿತಿ ಶೋಚನೀಯ: ರಾಜ್ಯದ 95 ಪ್ರತಿಶತ ಬಜೆಟ್ ಶಾಲೆಗಳು ಅದರಲ್ಲೂ ಉತ್ತರ ಕರ್ನಾಟಕ ವ್ಯಾಪ್ತಿಯ ಹೈದರಾಬಾದ್ ಕರ್ನಾಟಕ ಭಾಗದ ಬಜೆಟ್ ಶಾಲೆಗಳು ಸ್ಥಿತಿ ಇನ್ನು ಶೋಚನೀಯವಾಗಿದ್ದು ಅವರ ಕಥೆ ಕೇಳುವಂತಿಲ್ಲ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.
ಶೇ.60 ರಷ್ಟು ಶಾಲೆಗಳು ತಿಂಗಳ ಶುಲ್ಕ ಪಡೆಯುವಂತಹವು. ತಿಂಗಳ ಶುಲ್ಕದಿಂದಲೇ ಶಾಲೆಗಳು ನಡೆಯಬೇಕು. ಶಿಕ್ಷಕರ ವೇತನದಿಂದ ಹಿಡಿದು ಶಾಲೆ ಖರ್ಚು ವೆಚ್ಚ ಎಲ್ಲವೂ ತಿಂಗಳ ವೇತನಕ್ಕೆ ಅವಲಂಬಿತವಾಗಿವೆ ಹೀಗಾಗಿ ಸರ್ಕಾರವು ಈ ಸ್ಥಿತಿಯನ್ನ ಮನಗಂಡು ಇದಕ್ಕೆ ಪೂರಕವಾದ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.