ಬೆಂಗಳೂರು: ಸೆಪ್ಟೆಂಬರ್ 11ರಂದು (ನಾಳೆ) ಬೆಂಗಳೂರು ಬಂದ್‍ಗೆ ಖಾಸಗಿ ವಾಹನ ಚಾಲಕರ ಒಕ್ಕೂಟ ಸಿದ್ಧವಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಪರಿಣಾಮ ನಷ್ಟ ಅನುಭವಿಸುತ್ತಿರುವುದಾಗಿ ಹೇಳುತ್ತಿರುವ ಖಾಸಗಿ ವಾಹನ ಚಾಲಕರ ಒಕ್ಕೂಟಗಳು ಒಗ್ಗಟ್ಟಿನಿಂದ ಬಂದ್‍ಗೆ ಕರೆ ನೀಡಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಜೊತೆಗೆ ಬೆಂಗಳೂರಿಗೆ ಬಂದ್ ಬಿಸಿ ತಟ್ಟಲಿದೆ.
ಬೇಡಿಕೆಗಳೇನು?: ಸರ್ಕಾರದಿಂದ ಆಟೋ ಚಾಲಕರಿಗೆ 10 ಸಾವಿರ ರೂಪಾಯಿ ಮಾಸಿಕ ಪರಿಹಾರ ಹಣ ನೀಡಬೇಕು. ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ದಪಡಿಸಬೇಕು. ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಬೇಕು. ಎಲೆಕ್ಟ್ರಿಕ್ ಆಟೋಗಳಿಗೆ ರಹದಾರಿ ನೀಡಬೇಕು. ಟ್ಯಾಕ್ಸಿಗಳಿಗೆ ಜೀವಾವಧಿ ತೆರಿಗೆಯನ್ನು ಕಂತುಗಳಲ್ಲಿ ಪಾವತಿಸುವಂತೆ ಮಾಡಬೇಕು. ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು. ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಬೇಕು. ಖಾಸಗಿ ಬಸ್‌ಗಳಿಗೂ ಸ್ತ್ರೀ ಶಕ್ತಿ ಯೋಜನೆ ವಿಸ್ತರಿಸಬೇಕು. ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು. ಖಾಸಗಿ ಬಸ್‌ಗಳನ್ನು ಕಿಲೋಮೀಟರ್ ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು ಎಂಬುದು ಖಾಸಗಿ ವಾಹನ ಚಾಲಕರ ಒಕ್ಕೂಟದ ಬೇಡಿಕೆಯಾಗಿದೆ.
ಈಗಾಗಲೇ 32 ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿದ್ದು, 7 ಲಕ್ಷಕ್ಕೂ ಹೆಚ್ಚು ವಾಹನಗಳು ಇಂದು ರಾತ್ರಿಯಿಂದಲೇ ಸಂಚಾರ ನಿಲ್ಲಿಸಲಿವೆ. ಏರ್‌ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಓಲಾ, ಉಬರ್ ಆಟೋ ಟ್ಯಾಕ್ಸಿ ಸಹ ಬಂದ್ ಆಗಲಿವೆ. ಅಲ್ಲದೇ ಕಾರ್ಪೋರೇಟ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಸ್‍ಗಳು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಖಾಸಗಿ ವಾಹನ ಸಂಚಾರ ಸ್ಥಗಿತವಾಗಲಿದೆ. ಆದರೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳು ಯಥಾವತ್ ಸಂಚರಿಸಲಿವೆ.
'ಶಕ್ತಿ ಯೋಜನೆ'ಯಿಂದ ನಷ್ಟ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಪರಿಣಾಮವಾಗಿ ಖಾಸಗಿ ಸಾರಿಗೆ ವಾಹನಗಳನ್ನೇ ನಂಬಿ ಬದುಕುತ್ತಿದ್ದ ಚಾಲಕರು, ಸಿಬ್ಬಂದಿಗಳು ನಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಮೆಟ್ರೋ, ಆ್ಯಪ್ ಆಧಾರಿತ ಇ-ಟ್ಯಾಕ್ಸಿಗಳ ಪ್ರತಿಸ್ಪರ್ಧೆಯ ನಡುವೆ ಸೊರಗಿದ್ದ ಖಾಸಗಿ ಬಸ್, ಆಟೋ ಚಾಲರಿಗೆ ರಾಜ್ಯ ಸರ್ಕಾರದ ಶಕ್ತಿಯೋಜನೆ ಗಾಯದ ಮೇಲೆ ಬರೆ ಎಳೆದಂತಾಗಿದೆ.