ಬೆಂಗಳೂರು: ನಮ್ಮ ನಡೆ ಶಿಕ್ಷಕರ ಕಡೆ. ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಉಳಿದರೆ ಶಿಕ್ಷಣ ಎಂಬ ಘೋಷವಾಕ್ಯದೊಂದಿಗೆ ಡಿ.16 ರಂದು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಸಲು ಖಾಸಗಿ ಶಾಲೆಗಳು ಸಜ್ಜಾಗಿವೆ.
ಗುರು ಬ್ರಹ್ಮ, ಗುರು ವಿಷ್ಣು.. ಗುರು ದೇವೋ ಮಹೇಶ್ವರ ಎಂಬ ವಾಕ್ಯದೊಂದಿಗೆ, ನಮ್ಮ ದೇಶ ಗುರುವಿಗೆ ಹೆತ್ತವರ ನಂತರದ ಸ್ಥಾನ ನೀಡಿ ಗೌರವಿಸಲಾಗುತ್ತಿದೆ. ಕೋವಿಡ್ ಕರಿಛಾಯೆ ಹಿನ್ನೆಲೆಯಲ್ಲಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕನಿಷ್ಠ ಸಹಕಾರ ಹಾಗೂ ಅವರ ಬೆನ್ನಿಗೆ ಶಿಕ್ಷಣ ಸಂಸ್ಥೆಗಳು ನಿಂತು ಶಿಕ್ಷಣದ ವ್ಯವಸ್ಥೆಯಲ್ಲಿ ಅವರನ್ನು ಉಳಿಸಿ, ಗೌರವಿಸುವಂತಹ ಕೆಲಸ ಆಗಬೇಕಾಗಿದೆ. ಹಾಗಾಗಿ ನಮ್ಮ ಶಿಕ್ಷಕರ ಬೆನ್ನಿಗೆ ಶಿಕ್ಷಣ ಸಂಸ್ಥೆಗಳು ಜೊತೆಗೂಡಿ, ರಾಜ್ಯಾದ್ಯಂತ ಸಂಘಟನೆಯ ಜಿಲ್ಲಾ ಮುಖಂಡರು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯನ್ನು ಒಳಗೊಂಡಂತೆ ಮೌರ್ಯ ವೃತ್ತದ ಬಳಿ ಡಿ.16ರ ಬುಧವಾರದಂದು ಕಾಲ್ನಡಿಗೆಯಲ್ಲಿ ಫ್ರೀಡಂ ಪಾರ್ಕಿಗೆ ತೆರಳಲಿದ್ದಾರೆ. ಅಲ್ಲಿ ಸಭೆಯನ್ನು ಉದ್ದೇಶಿಸಿ, ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.