ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಪ್ರತಿಭಟನೆಗಳ ಕಾವು ಜೋರಾಗುತ್ತಿದೆ. ಇಂದೂ ಕೂಡ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಖಾಸಗಿ ಶಾಲಾ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೀದಿಗಿಳಿದ ಖಾಸಗಿ ಶಾಲಾ ಶಿಕ್ಷಕರು ಮೌರ್ಯ ಸರ್ಕಲ್ನಿಂದ ಫ್ರೀಡಂ ಪಾರ್ಕ್ವರೆಗೂ ಕಾಲ್ನಡಿಗೆ ಮೂಲಕ ಜಾಥಾ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಖಾಸಗಿ ಶಿಕ್ಷಕ-ಶಿಕ್ಷಕರೇತರ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಕೊರೊನಾ ಲಸಿಕೆಯನ್ನ ಪ್ರಥಮ ಹಂತದಲ್ಲಿ ಶಿಕ್ಷಕರಿಗೂ ನೀಡಬೇಕು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ಆಹಾರ ಪದಾರ್ಥಗಳ ಕಿಟ್ ನೀಡಬೇಕು. ಸಿಬ್ಬಂದಿಗೆ ಗೌರವಧನ ನೀಡಬೇಕು. ಸರ್ಕಾರ ಪ್ರತ್ಯೇಕ ವಿಮೆ ಸೌಲಭ್ಯ ಹಾಗೂ ಶಾಲೆಗಳ ಆರಂಭ, ದಾಖಲಾತಿ, ಮೌಲ್ಯಮಾಪನದ ತೇರ್ಗಡೆ, ಬಾಕಿ ಹಾಗೂ ಪ್ರಸ್ತುತ ಕನಿಷ್ಠ ಶುಲ್ಕ ಕಟ್ಟಿ ದಾಖಲಾತಿ ಮಾಡುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಫ್ರೀಡಂ ಪಾರ್ಕ್ ಬಳಿ ಪ್ರತಿಭಟನಾ ಸಭೆ ನಡೆಸಿದರು.
ಇತ್ತ ಪ್ರತಿಭಟನೆ ಕಾವು ಜೋರಾಗುತ್ತಿದ್ದಂತೆ ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಬಸವರಾಜ್ ಹೊರಟ್ಟಿ, ಆಯುನೂರ್ ಮಂಜುನಾಥ್, ಶಿಕ್ಷಣ ಇಲಾಖೆ ಆಯುಕ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದರು.
ಓದಿ: ನಮ್ಮನ್ನೂ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ: ಖಾಸಗಿ ಶಾಲಾ ಶಿಕ್ಷಕರ ಒತ್ತಾಯ
ಈ ವೇಳೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಶಿಕ್ಷಕರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಶಿಕ್ಷಕರ ಸಮಸ್ಯೆ ಬಹಳಷ್ಟಿದೆ. ಕೋವಿಡ್‌ನಿಂದ ರಾಜ್ಯ ಸರ್ಕಾರದಿಂದ ಬಹಳಷ್ಟು ಕೆಲಸ ಮಾಡಲಾಗಿರಲಿಲ್ಲ. ಹೀಗಾಗಿ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲು ಸಾಲ ಪಡೆದು ನೀಡಬೇಕಾದ ಪರಿಸ್ಥಿತಿ ಬಂದಿದೆ. ಆಹಾರ ಪದಾರ್ಥಗಳ ಕಿಟ್, ಗೌರವಧನ ನೀಡುವುದು, ಕೋವಿಡ್ ವ್ಯಾಕ್ಸಿನ್ ಕೊಡುವ ಬೇಡಿಕೆ ಇದೆ. ಇದು ಅಡ್ಮಿನಿಸ್ಟ್ರೇಶನ್ನಿಂದ ಅಧಿಕೃತವಾಗಿ ಆದೇಶವಾಗಬೇಕಿದೆ. ಶಾಲಾಡಳಿತ ಮಂಡಳಿ ಬೇಡಿಕೆಯಲ್ಲಿ ಯಾವ ಬೇಡಿಕೆ ಈಡೇರಿಸಬಹುದು ಅನ್ನೋದನ್ನ ಗಮನಿಸುತ್ತೇವೆ. ಸಾಧ್ಯವಾದಷ್ಟು ಅವರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ಮನವಿ ಸ್ವೀಕಾರದ ಬಳಿಕ ಮಾತನಾಡಿದ ಆರ್.ಅಶೋಕ್, ಸಿಎಂ ಕರೆ ಮಾಡಿ ಅವರ ಬೇಡಿಕೆ ಆಲಿಸುವಂತೆ ತಿಳಿಸಿದ್ರು. ಮುಖ್ಯಮಂತ್ರಿಗಳ ಪರವಾಗಿ ನಾವು ಬಂದಿದ್ದೇವೆ. ಕೋವಿಡ್ ಲಸಿಕೆಗೆ ಬೇಡಿಕೆ ಇದೆ. ಲಸಿಕೆ ಕೊಡುವ ಸಂದರ್ಭದಲ್ಲಿ ನಿಮಗೂ ಮೊದಲ ಹಂತದಲ್ಲಿ ಕೊಡುವಂತೆ ನಾವು ಸಿಎಂಗೆ ತಿಳಿಸುತ್ತೇವೆ. ಶಿಕ್ಷಕ ಸಿಬ್ಬಂದಿಗೆ ಪ್ರತ್ಯೇಕ ವಿಮೆ, ಗೌರವಧನ, ಕಿಟ್ ಎಲ್ಲವನ್ನೂ ನೀಡುವುದರಿಂದ ಸರ್ಕಾರದ ಮೇಲೆ ಹೊರೆ ಬೀಳಲಿದೆ. ಸದ್ಯ ಕೊರೊನಾದಿಂದ ಸರ್ಕಾರ ಚೇತರಿಸಿಕೊಳ್ಳುತ್ತಿದೆ. ನಾವು ಶಿಕ್ಷಕರ ಜೊತೆ ನಿಲ್ಲುತ್ತೇವೆ. ಪ್ರಾಮಾಣಿಕವಾಗಿ ನಿಮ್ಮ ಬೇಡಿಕೆ ಈಡೇರಿಸಲು ಸರ್ಕಾರ ಸ್ಪಂದಿಸಲಿದೆ ಎಂದರು.
ಸಚಿವರು ಭರವಸೆ ನೀಡಿದ ಬೆನ್ನಲ್ಲೇ ಪ್ರತಿಭಟನೆ ಹಿಂಪಡೆಯಲಾಯ್ತು. ನಂತರ ಮಾತನಾಡಿದ ಶಾಸಗಿ ಶಾಲಾ ಶಿಕ್ಷಣ ಒಕ್ಕೂಟ ಅಧ್ಯಕ್ಷ ಶಶಿಕುಮಾರ್, ಸಚಿವರುಗಳು ಬಂದು ನಮ್ಮ ಮನವಿ ಆಲಿಸಿದ್ದಾರೆ. ಕೂಡಲೇ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದೇವೆ. ಸಿಎಂ ಬಳಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ನಾವು ಸ್ವಲ್ಪ ದಿನ ಕಾಯುತ್ತೇವೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಬಗ್ಗೆ ಚಿಂತಿಸುತ್ತೇವೆ ಎಂದರು.