ಬೆಂಗಳೂರು :ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಿದ್ದಿದ್ದರೆ ಶಾಲೆಗಳನ್ನು ಬಂದ್ ಮಾಡುವುದಾಗಿ ಖಾಸಗಿ ಶಾಲೆಗಳು ಎಚ್ಚರಿಕೆ ನೀಡಿವೆ.
ಇಂದು ರಾಜ್ಯದ ವಿವಿಧ ಭಾಗಗಳಿಂದ ಖಾಸಗಿ ಶಾಲೆಗಳ ಪದಾಧಿಕಾರಿಗಳು ಶಾಸಕರ ಭವನದಲ್ಲಿ ಮಹತ್ವದ ಸಭೆಯನ್ನು ನಡೆಸಿದರು. ಸುದೀರ್ಘವಾಗಿ ಚರ್ಚಿಸಿದ ಬಳಿಕ ಅವರ ಪ್ರಮುಖ ಬೇಡಿಕೆಯಾದ ಮಾನ್ಯತೆ ನವೀಕರಣ ವಿಚಾರದಲ್ಲಿ ಕಟ್ಟಡ ದಕ್ಷತೆ ಹಾಗೂ ಅಗ್ನಿ ಅವಘಡ ಸುರಕ್ಷತಾ ಪ್ರಮಾಣ ಪತ್ರ ನೀಡುವಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಂದ ಆಗುತ್ತಿರುವ ಶೋಷಣೆ ನಿಲ್ಲಿಸುವಂತೆ ಆಗ್ರಹಿಸಿದರು. ಹಾಗೆಯೇ, 1995 ನಂತರದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ಕೋವಿಡ್ ಪ್ಯಾಕೇಜ್ ನೀಡಿ :ಖಾಸಗಿ ಶಾಲಾ ನೌಕರರಿಗೆ ಕೋವಿಡ್ ಪಾಕೇಜ್ ನೀಡುತ್ತೇವೆ ಎಂದು ಸರ್ಕಾರವು ಆಶ್ವಾಸನೆ ನೀಡಿತ್ತು. ಆದರೆ, ಇನ್ನೂ ಸಂಪೂರ್ಣ ಅನುಷ್ಠಾನಗೊಳಿಸಿಲ್ಲ. ತ್ವರಿತವಾಗಿ ಇದನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಜೊತೆಗೆ ಕಳೆದ ನಾಲ್ಕು ವರ್ಷದಿಂದಲೂ ಆರ್ಟಿಇ ಶುಲ್ಕ ಮರುಪಾವತಿಯನ್ನು ಹೆಚ್ಚಿಸಿಲ್ಲ. ಕಳದೆರಡು ವರ್ಷದ ಬಾಕಿ ಹಣವನ್ನು ಕೊಡದೆ ವಂಚಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ದೋಷಪೂರಿತ ಅವೈಜ್ಞಾನಿಕ ಸುತ್ತೋಲೆಗಳ ಪರಿಣಾಮ ಸುಮಾರು 10 ಸಾವಿರಕ್ಕೂ ಅಧಿಕ ಶಾಲೆಗಳು ಮುಚ್ಚುವಂತಹ ಹಂತದಲ್ಲಿವೆ. ಅಧಿಕಾರಿಗಳ ಲಂಚದ ಶೋಷಣೆಗೆ ಗುರಿಯಾಗಿ ಅವಮಾನವನ್ನು ಅನುಭವಿಸುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ. ಮಾನ್ಯತೆ ನವೀಕರಣ ವಿಚಾರದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಶೋಷಣೆ ಆಗುತ್ತಿದೆ. ಅದನ್ನ ನಿಲ್ಲಿಸುವಂತೆ ರೂಪ್ಸಾ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.