ಬೆಂಗಳೂರು :ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಪ್ರಾರಂಭಕ್ಕೆ ದಿನಾಂಕ ಘೋಷಣೆ ಮಾಡಲಾಗಿದೆ. ಇದೀಗ ಖಾಸಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ. ಪೂರಕ ಪರೀಕ್ಷೆಗೂ ಮುನ್ನವೇ ಕಾಲೇಜು ಆರಂಭವಾಗುತ್ತಿರುವುದಕ್ಕೆ ಪಿಯು ಖಾಸಗಿ ಅಭ್ಯರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ. ತಮಗೂ ಎಸ್ಎಸ್ಎಲ್‌ಸಿ ಮಾದರಿಯಲ್ಲಿ ಸರಳವಾಗಿ ಪರೀಕ್ಷೆ ಮಾಡಿ ಪಾಸ್ ಮಾಡಿ ಎಂದು ವಿದ್ಯಾರ್ಥಿಗಳೆಲ್ಲ ಒತ್ತಾಯ ಮಾಡಿದ್ದಾರೆ.
SSLC ಮಾದರಿ ಪರೀಕ್ಷೆ ನಡೆಸುವಂತೆ ಖಾಸಗಿ ದ್ವಿತೀಯ ಪಿಯು ಅಭ್ಯರ್ಥಿಗಳ ಒತ್ತಾಯ ಎಸ್ಎಸ್ಎಲ್‌ಸಿ ಪರೀಕ್ಷಾ ಮಾದರಿಯಂತೆ ಸರಳ ಮಾದರಿಯಲ್ಲಿ ನಮಗೂ ಪೂರಕ ಪರೀಕ್ಷೆ ಮಾಡಿ, ಎಲ್ಲರನ್ನು ಪಾಸ್ ಮಾಡುವಂತೆ ಶಿಕ್ಷಣ ಸಚಿವರಿಗೆ ಪಿಯು ಖಾಸಗಿ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.
ಕೊರೊನಾ ಕಾರಣಕ್ಕೆ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿ ಎಲ್ಲರನ್ನೂ ಪಾಸ್ ಮಾಡಲಾಗಿದೆ. ಅದು ಕೂಡ ಎಸ್ಎಸ್ಎಲ್‌ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳನ್ನ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ.
ಇತ್ತ ಫಲಿತಾಂಶ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವರಿಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ಆ.19ರಿಂದ ಸೆ. 3ರವರೆಗೆ ಪರೀಕ್ಷೆ ನಡೆಸಲು ಇಲಾಖೆ ಸಜ್ಜಾಗಿದೆ. ಪರೀಕ್ಷೆ ನಡೆಸಿ ಸೆ.20ಕ್ಕೆ ಫಲಿತಾಂಶ ನೀಡಲು ಬೋರ್ಡ್ ಮುಂದಾಗಿದೆ. ಇದು ಖಾಸಗಿ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕೊರೊನಾ 3ನೇ ಅಲೆಯ ಭೀತಿ ಇದ್ದು, ಮತ್ತೆ ಪರೀಕ್ಷೆ ಮುಂದೂಡುವ ಆತಂಕವೂ ಎದುರಾಗಿದೆ.
ಓದಿ: ಬಿಎಸ್ವೈ ನಿವಾಸಕ್ಕೆ ಸಚಿವ ಆನಂದ್ ಸಿಂಗ್ ಭೇಟಿ.. ಸಮಾಲೋಚನೆ
ಪರೀಕ್ಷೆ ಮುಂದೂಡಿದರೆ ಪದವಿ ಕಾಲೇಜು ಸೇರ್ಪಡೆ ಯಾವಾಗ?:ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆ. 23ರಿಂದ ಆರಂಭವಾಗಲಿವೆ. ಈ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಕಲಿಕೆಗೆ ಹೊಡೆತ ಬೀಳಲಿದೆ. ಆ.19ರಿಂದ ಪರೀಕ್ಷಾ ದಿನಾಂಕ ಘೋಷಿಸುತ್ತಿರುವ ಇಲಾಖೆ, ಇನ್ನು ಹಾಲ್ ಟಿಕೆಟ್ ಕೊಟ್ಟಿಲ್ಲ.
17 ದಿನಗಳ ಕಾಲ ನಡೆಯುವ ಪರೀಕ್ಷೆ ನಂತರ ಫಲಿತಾಂಶಕ್ಕೆ ಮತ್ತೊಂದಿಷ್ಟು ದಿನ ಕಳೆಯಲಿದೆ. ಇದರ ಬದಲು ಸರಳವಾಗಿ ಎಸ್ಎಸ್ಎಲ್‌ಸಿ ರೀತಿಯಲ್ಲಿ ಪರೀಕ್ಷೆ ಮಾಡಿ ಬಹುಬೇಗ ಫಲಿತಾಂಶ ನೀಡುವಂತೆ ಒತ್ತಾಯ ಮಾಡಿದ್ದಾರೆ.