ಬೆಂಗಳೂರು:ಬಿಜೆಪಿ ಚುನಾವಣಾ ಟಿಕೆಟ್ ಘೋಷಣೆ ಸಮೀಪದಲ್ಲಿರುವಾಗಲೇ ಮಾಜಿ ಸಚಿವ, ಹೆಬ್ಬಾಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಖಾಸಗಿ ಫೋಟೋ ವೈರಲ್ ಆಗಿದೆ. ಇನ್ನೆರಡು ದಿನಗಳಲ್ಲಿ ಟಿಕೆಟ್ ಘೋಷಣೆಯಾಗುವಷ್ಟರಲ್ಲೇ ಕಟ್ಟಾ ಅವರ ಫೋಟೋ ವೈರಲ್ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. ಮಾತ್ರವಲ್ಲ, ಟಿಕೆಟ್ ಕೈತಪ್ಪಿಸಲು ವಿರೋಧಿಗಳು ಖಾಸಗಿ ಫೋಟೋವನ್ನು ಹರಿಬಿಟ್ಟಿದ್ದಾರಾ ಎಂಬ ಅನುಮಾನಕ್ಕೂ ಕಾರಣವಾಗಿದೆ.
ಶರ್ಟ್ ಇಲ್ಲದೇ ಮನೆಯಲ್ಲಿ ಕಟ್ಟಾ ಅವರು ಕುಳಿತಿರುವ ಫೋಟೋ ಹರಿಬಿಡಲಾಗಿದ್ದು, ಅಶ್ಲೀಲ ಫೋಟೋ ಕೂಡ ಇದಾಗಿಲ್ಲ. ಒಟ್ಟಿನಲ್ಲಿ ರಾಜಕೀಯ ದುರುದ್ದೇಶದಿಂದ ಟಿಕೆಟ್ ಕೈ ತಪ್ಪಿಸಲು ಈ ರೀತಿ ಮಾಡಲಾಗಿದೆ ಎಂದು ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ವೈರಲ್ ಫೋಟೋ ಕುರಿತು ಮಾತನಾಡಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, "ಇದು ನನ್ನದೇ ಫೋಟೋ, ಆದರೆ ಅನಾರೋಗ್ಯದ ಕಾರಣಗಳಿಂದ ಹಲವಾರು ವರ್ಷಗಳಿಂದ ಫಿಸಿಯೋಥೆರಪಿ ಮಾಡಿಸುತ್ತಿದ್ದೆ. ಲಂಡನ್ಗೆ ಹೋಗಿ ಆಪರೇಷನ್ ಮಾಡಿಸಿಕೊಂಡು ಬಂದಿದ್ದೆ. ಅದಾದ ಮೇಲೆ ವೈದ್ಯರ ಸಲಹೆ ಮೇರೆಗೆ ನಿರಂತರವಾಗಿ ನಮ್ಮ ಮನೆ ಒಳಗೆ ಫಿಸಿಯೋಥೆರಪಿ ಮಾಡಿಸಿಕೊಳ್ಳುತ್ತಿದ್ದೆ. ಇವತ್ತು ಬೆಳಗ್ಗೆ ನನ್ನ ಫೋಟೋ ವೈರಲ್ ಆಗುತ್ತಿರುವುದು ಗೊತ್ತಾಯಿತು. ಅದು ನನ್ನದೇ ಫೋಟೋ. ಇಲ್ಲ ಅಂತ ನಾನು ಹೇಳೋದಿಲ್ಲ."
"ಆ ಸಂದರ್ಭದಲ್ಲಿನ ನನ್ನ ವೈಯಕ್ತಿಕವಾದ ಫೋಟೋ ಅದು. ನನ್ನ ಮನೆಯೊಳಗೆ ನಾನು ಹಾಗೆ ಇದ್ದೇನೆ, ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿಯೇ ಎರಡು ವರ್ಷಗಳಾಯ್ತು. ಆದರೆ ಈಗ ರಾಜಕೀಯ ವಿರೋಧಿಗಳು ಇದನ್ನು ಎಲ್ಲಿಂದಲೋ ಕದ್ದು, ಇದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನಮ್ಮ ಮೇಲೆ ಪಿತೂರಿ ಮಾಡಲು ಹೊರಟಿದ್ದಾರೆ. ವಿರೋಧಿಗಳು ಎಂದರೆ ಬೇರೆ ಯಾರೂ ಅಲ್ಲ ಕಾಂಗ್ರೆಸ್‌ನವರ ಕೈವಾಡ ಇದೆ. ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೆ, ಈ ರೀತಿ ವಾಮಮಾರ್ಗದಿಂದ ಎದುರಿಸಲು ಹೊರಟಿದ್ದಾರೆ" ಎಂದು ಆರೋಪಿಸಿದ್ದಾರೆ.
"ಈ ಫೋಟೋ ಸುಮಾರು ಎರಡು ವರ್ಷಗಳು ಹಳೇಯದು. ಕೋವಿಡ್ ಪ್ರಾರಂಭವಾದ ನಂತರ ಕಳೆದ ಎರಡು ವರ್ಷಗಳು ನಾನು ನನ್ನ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದೇನೆ. ಕ್ಷೇತ್ರದಲ್ಲಿ ಹೆಚ್ಚು ಓಡಾಡುತ್ತಿರುವುದರಿಂದ ಫಿಸಿಯೋಥೆರಪಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದೇನೆ. ಫಿಸಿಯೋಥೆರಪಿ ನಿಲ್ಲಿಸಿಯೇ ಎರಡು ವರ್ಷಗಳಾಗಿದೆ. ಅಲ್ಲಿಂದ ನಂತರ ಈ ಥರ ಫಿಸಿಯೋಥೆರಪಿ, ಮಸಾಜ್ ಯಾವುದನ್ನೂ ಮಾಡಿಸಿಕೊಳ್ಳಲು ಹೋಗಿಲ್ಲ."
"ಆ ರೀತಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸಹಜವಾಗಿ ಪ್ರತಿ ಮನೆಯಲ್ಲಿ ಇರುವಂತೆ ಇದ್ದೇವೆ. ನಮ್ಮ ಕಾನೂನು ಸಲಹೆಗಾರರ ಜೊತೆ ಮಾತನಾಡುತ್ತೇನೆ. ನಂತರ ಅವರು ಹೇಳಿದಂತೆ ಕಾನೂನು ರೀತಿಯಲ್ಲಿ ಮುಂದುವರಿಯುತ್ತೇನೆ. ನೇರವಾಗಿ ನನ್ನನ್ನ ಎದುರಿಸಲು ಸಾಧ್ಯವಾಗದ ಕಾಂಗ್ರೆಸ್ ನಾಯಕರು ಈ ರೀತಿ ಮಾಡಿದ್ದಾರೆ. ಕಾರ್ಯಕರ್ತರು ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಚುನಾವಣೆಗೆ ಸಿದ್ಧರಾಗಿ' ಎಂದು ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಅಲ್ಲದೇ ಕಾನೂನು ತಜ್ಞರ ಸಲಹೆ ಪಡೆದಿರುವ ಕಟ್ಟಾ, ಸದಾಶಿವನಗರ ಠಾಣೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಿದ್ದೇನೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಶಾಸಕರ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ: ಪ್ರಕರಣ ದಾಖಲು