ಕರ್ನಾಟಕ

karnataka

ETV Bharat / state

ರೋಗಿಗಳು ನರಳುತ್ತಿದ್ದರೂ 3500 ಬೆಡ್​ಗಳನ್ನು ಸರ್ಕಾರಕ್ಕೆ ನೀಡದ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು.. - not provide 3500 beds to the government

ಬೆಂಗಳೂರಿನ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಕೋವಿಡ್ ಚಿಕಿತ್ಸೆಗಾಗಿ ತಮ್ಮಲ್ಲಿರುವ ಶೇ.75ರಷ್ಟು ಬೆಡ್​ಗಳನ್ನು ಬಿಬಿಎಂಪಿಗೆ ಮೀಸಲಿಡಬೇಕು ಎಂದು ರಾಜ್ಯ ಸರ್ಕಾರ ಈ ಹಿಂದೆಯೇ ಆದೇಶಿಸಿತ್ತು. ಆದರೆ, ಈವರೆಗೂ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ನೀಡಬೇಕಿದ್ದ 3,583 ಬೆಡ್‌ಗಳನ್ನು ಬಾಕಿ ಉಳಿಸಿಕೊಂಡಿವೆ..

Treatment
ಚಿಕಿತ್ಸೆ

By

Published : May 5, 2021, 8:59 PM IST

ಬೆಂಗಳೂರು :ಕೋವಿಡ್ ಉಲ್ಬಣಿಸುತ್ತಿರುವ ಹೊತ್ತಲ್ಲೂ ನಗರದಲ್ಲಿರುವ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಬೆಡ್‌ಗಳನ್ನು ನೀಡದೆ ಸತಾಯಿಸುತ್ತಿರುವ ಮಾಹಿತಿ ಈಟಿವಿ ಭಾರತ್​ಗೆ ಲಭ್ಯವಾಗಿದೆ. ಯಾವ ಆಸ್ಪತ್ರೆ ಎಷ್ಟು ಬೆಡ್ ನೀಡಬೇಕು ಎಂಬ ನಿಖರ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಕೋವಿಡ್ ಚಿಕಿತ್ಸೆಗಾಗಿ ತಮ್ಮಲ್ಲಿರುವ ಶೇ.75ರಷ್ಟು ಬೆಡ್​ಗಳನ್ನು ಬಿಬಿಎಂಪಿಗೆ ಮೀಸಲಿಡಬೇಕು ಎಂದು ರಾಜ್ಯ ಸರ್ಕಾರ ಈ ಹಿಂದೆಯೇ ಆದೇಶಿಸಿತ್ತು. ಆದರೆ, ಈವರೆಗೂ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ನೀಡಬೇಕಿದ್ದ 3,583 ಬೆಡ್‌ಗಳನ್ನು ಬಾಕಿ ಉಳಿಸಿಕೊಂಡಿವೆ.

ನಗರದಲ್ಲಿ ಒಟ್ಟು 12 ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿ ಒಟ್ಟು 11,642 ಹಾಸಿಗೆಗಳಿವೆ. ಸರ್ಕಾರದ ಆದೇಶದ ಪ್ರಕಾರ, ಈ ಸಂಸ್ಥೆಗಳು 8732 ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಬೇಕಿದೆ. ಆದರೆ, ಈವರೆಗೆ 5149 ಬೆಡ್‌ಗಳನ್ನಷ್ಟೇ ನೀಡಿದ್ದು, ಇನ್ನೂ 3583 ಹಾಸಿಗೆಗಳನ್ನ ಬಾಕಿ ಉಳಿಸಿಕೊಂಡಿವೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಸ್ಥಾಪನೆ(ಕೆಪಿಎಂಇ) ಪ್ರಕಾರ, 4888 ಸಾಮಾನ್ಯ ಹಾಸಿಗೆ, 3301 ಹೆಚ್​ಡಿಯು ಬೆಡ್, 598 ಐಸಿಯು ಬೆಡ್ , 274 ವೆಂಟಿಲೇಟರ್ ಬೆಡ್​ಗಳು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿದೆ.

ಸರ್ಕಾರದ ಆದೇಶದಂತೆ ಈ ಪೈಕಿ ಶೇ 75 ರಷ್ಟು ಬೆಡ್​ಗಳನ್ನು ಕೋವಿಡ್ ಚಿಕಿತ್ಸೆಗಾಗಿ ಬಿಬಿಎಂಗೆ ನೀಡಬೇಕು. ಇದೀಗ ಈಟಿವಿ ಭಾರತಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಬಿಬಿಎಂಪಿಗೆ 3089 ಸಾಮಾನ್ಯ ಹಾಸಿಗೆ , 1806 ಹೆಚ್​ಡಿಯು ಬೆಡ್, 114 ಐಸಿಯು ಬೆಡ್, 140 ವೆಂಟಿಲೇಟರ್ ಬೆಡ್​ಗಳನ್ನು ಮಾತ್ರ ನೀಡಲಾಗಿದೆ.

ಕೋವಿಡ್ ಚಿಕಿತ್ಸೆಗೆ ಬೆಡ್​ಗಳನ್ನು ನೀಡುವಂತೆ ಸರ್ಕಾರ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಆದೇಶಿಸಿ ವಾರ ಕಳೆದಿದ್ದರೂ, ಬಾಕಿ ಬೆಡ್​ಗಳು ಈವರೆಗೆ ಲಭ್ಯವಾಗಿಲ್ಲ. ಈ ಬಗ್ಗೆ ಈಟಿವಿ ಭಾರತ್​ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ಅವರಿಗೆ ದೂರವಾಣಿ ಹಾಗೂ ಇ-ಮೇಲ್ ಮೂಲಕ ಸಂಪರ್ಕಿಸಿ ಮಾಹಿತಿ ಕೋರಿದ್ದರೂ ಸ್ಪಷ್ಟನೆ ನೀಡಿಲ್ಲ.

ಯಾವ ಕಾರಣಕ್ಕಾಗಿ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಬೆಡ್ ನೀಡಿಲ್ಲ. ಈ ಸಂಬಂಧ ಸಂಸ್ಥೆಗಳಿಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆಯೇ? ಕೋವಿಡ್ ಮೊದಲ ಅಲೆ ವೇಳೆ ಪಡೆದಿದ್ದ ಸೇವೆಗೆ ಸರ್ಕಾರ ಹಿಂಬಾಕಿ ಪಾವತಿಸುವ ಕುರಿತು ಸಂಸ್ಥೆಗಳು ಮನವಿ ಸಲ್ಲಿಸಿವೆಯೇ? ಎಂಬ ಬಗ್ಗೆ ಪ್ರಶ್ನಿಸಿದ್ದರೂ ಮಾಹಿತಿ ನೀಡಿಲ್ಲ. ಇನ್ನು, ಸರ್ಕಾರಕ್ಕೆ ಬೆಡ್ ನೀಡಿಲ್ಲವೇಕೆ ಎಂಬ ಬಗ್ಗೆ ಕೆಲ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಪ್ರಶ್ನಿಸಿದಾಗಲೂ ಅವು ಪ್ರತಿಕ್ರಿಯೆ ನೀಡಿಲ್ಲ.

ಸರ್ಕಾರ ಪಾರದರ್ಶಕವಾಗಿರಬೇಕು : ಸರ್ಕಾರ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೋವಿಡ್ ಮಹಾಮಾರಿಯ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇವರಿಬ್ಬರ ಒಳ ಒಪ್ಪಂದದಿಂದ ಬಡವರಿಗೆ ಹಾಗೂ ತುರ್ತು ಚಿಕಿತ್ಸೆ ಅಗತ್ಯವಿರುವವರೆಗೆ ಚಿಕಿತ್ಸೆ ಸಿಗುತ್ತಿಲ್ಲ.

ಈಗಲಾದರೂ ಸರ್ಕಾರ ಎಚ್ಚೆತ್ತು ಖಾಸಗಿ ಹಾಗೂ ಸರ್ಕಾರಿ ಬೆಡ್‌ಗಳ ಲಭ್ಯತೆ ಬಗ್ಗೆ ಪ್ರತಿನಿತ್ಯ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸರ್ಕಾರ ಈ ಸಂದರ್ಭದಲ್ಲಾದರೂ ಪಾರದರ್ಶಕತೆಯಿಂದ ವರ್ತಿಸಬೇಕು ಎಂದು ಕರ್ನಾಟಕ ಜನಾರೋಗ್ಯ ಚಳವಳಿ ಸಹಸಂಚಾಲಕ ವಿಜಯಕುಮಾರ್ ಆಗ್ರಹಿಸಿದ್ದಾರೆ.

ವೈದ್ಯಕೀಯ ಶಿಕ್ಸಣ ಸಂಸ್ಥೆ ಕೊಟ್ಟಿರುವ ಹಾಸಿಗೆ ಸಂಖ್ಯೆ ಕೊಡಬೇಕಿದ್ದ ಹಾಸಿಗೆ ಸಂಖ್ಯೆ ಬಾಕಿ
ಆಕಾಶ್ ಆಸ್ಪತ್ರೆ 632 638 6
ಬಿಜಿಎಸ್ 300 533 233
ಡಾ ಬಿ ಆರ್​ ಅಂಬೇಡ್ಕರ್ 225 518 293
ಈಸ್ಟ್ ಪಾಯಿಂಟ್ 295 488 193
ಕಿಮ್ಸ್ 550 922 372
ಎಂ ಎಸ್​ ರಾಮಯ್ಯ 450 1013 563
ಎಂ ವಿ ಜೆ 320 625 305
ರಾಜರಾಜೇಶ್ವರಿ 575 1050 475
ಸಪ್ತಗಿರಿ 573 563 10
ಸೇಂಟ್​ ಜಾನ್ಸ್​ 629 998 369
ದಿ ಆಕ್ಸ್ ಫರ್ಡ್ 200 488 288
ವೈದೇಹಿ 400 900 500
ಒಟ್ಟು 5149 8732 3583

ಓದಿ:ಏನ್ರೀ ಡಾಕ್ಟರೇ.. ಹಿಂಗಾ ಮಾಡೋದು!! ಆನ್​ಲೈನ್​ ಸಮಾಲೋಚನೆಗೆ ₹50 ಸಾವಿರ ಪೀಕುತ್ತಾನೆ ಈ ವೈದ್ಯ.. ವಾಟ್ಸ್​ಆ್ಯಪ್​ ಚಾಟ್​ ವೈರಲ್​

For All Latest Updates

ABOUT THE AUTHOR

...view details