ಬೆಂಗಳೂರು: 4,500 ಬೆಡ್ಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿರಿಸಲು ಖಾಸಗಿ ವೈದ್ಯಕೀಯ ಕಾಲೇಜುಗಳು ಒಪ್ಪಿಕೊಂಡಿವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜುಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಜೊತೆ ಚರ್ಚೆ ನಡೆಸಲಾಯಿತು. ಒಳ್ಳೆ ರೀತಿಯ ಸ್ಪಂದನೆ ಅವರಿಂದ ಸಿಕ್ಕಿದೆ. ಎಲ್ಲರೂ ಸಹಕಾರ ಕೊಡುತ್ತೇವೆ ಎಂದು ಖಾಸಗಿ ವೈದ್ಯಕೀಯ ಕಾಲೇಜಿನವರು ಭರವಸೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಗೂ ವಿಮೆ ಅನ್ವಯ 50 ಲಕ್ಷ ರೂ. ಮೊತ್ತದ ಆಗಲಿದೆ ಎಂದು ಇದೇ ವೇಳೆ ತಿಳಿಸಿದರು.
ಸಭೆಯಲ್ಲಿ ಪ್ರಸ್ತುತ ವರದಿಯಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ, 4500 ಹಾಸಿಗೆಗಳನ್ನು ಖಾಸಗಿ ಕಾಲೇಜುಗಳಿಂದ ಸರ್ಕಾರ ನಿರೀಕ್ಷಿಸುತ್ತಿದೆ. ಕಳೆದ ನಾಲ್ಕು ತಿಂಗಳಿಂದ 10 ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ, ಇತರೆ ಎಲ್ಲ ಕಾಲೇಜುಗಳು ಪ್ರಯೋಗಾಲಯ ವ್ಯವಸ್ಥೆ ಮಾಡಿವೆ. ಸರ್ಕಾರಿ ಕಾಲೇಜುಗಳಲ್ಲಿ 2000 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4500 ಸೇರಿದಂತೆ ಸುಮಾರು 6500 ಹಾಸಿಗೆಗಳು ಬೆಂಗಳೂರಿನ ವೈದ್ಯಕೀಯ ಕಾಲೇಜುಗಳಲ್ಲಿಯೇ ಲಭ್ಯವಾಗುತ್ತಿವೆ. ಇದಕ್ಕೆ ಖಾಸಗಿ ವೈದ್ಯಕೀಯ ಕಾಲೇಜುಗಳು ಸಹಕರಿಸುವಂತೆ ಸಿಎಂ ಮನವಿ ಮಾಡಿದರು.