ಬೆಂಗಳೂರು:ಸರ್ಕಾರಕ್ಕೆ ನಿಗದಿತ ಹಾಸಿಗೆಗಳನ್ನ ನೀಡದೆ ಅನೇಕ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳು ಕಣ್ಣಾ ಮುಚ್ಚಾಲೆ ಆಟವಾಡುತ್ತಿದ್ದವು ಎಂದು ಕಂದಾಯ ಸಚಿವ ಆರ್ ಅಶೋಕ್ ಕಿಡಿಕಾರಿದರು.
ಆಸ್ಪತ್ರೆಗಳ ಹಾಸಿಗೆ ಮರೆಮಾಚುವಿಕೆ ತಡೆಗೆ ಅಧಿಕಾರಿಗಳ ತಂಡ ಭೇಟಿ ನೀಡಿ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡಿದ್ದು, ರಾಜರಾಜೇಶ್ವರಿ ಹಾಗೂ ವೈದೇಹಿ ಆಸ್ಪತ್ರೆಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದು ಬೆಳಕಿಗೆ ಬಂದಿದೆ. ಈಗ ಆಸ್ಪತ್ರೆಯ ಆಡಳಿತ ಮಂಡಳಿ ನಿಗದಿತ ಹಾಸಿಗೆಗಳನ್ನು ನೀಡಲು ಒಪ್ಪಿಕೊಂಡಿದ್ದು, ಸರ್ಕಾರಕ್ಕೆ ಹೆಚ್ಚುವರಿಯಾಗಿ 2,216 ಬೆಡ್ ಲಭ್ಯವಾಗಿವೆ ಎಂದರು.
ಆಕ್ಸಿಜನ್ ಅಭಾವ ನೀಗಿಸುವ ನಿಟ್ಟಿನಲ್ಲಿಯೂ ಸಾಕಷ್ಟು ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಆ ಪ್ರಕಾರವಾಗಿ ತುರ್ತು ಸಂದರ್ಭದಲ್ಲಿ ಸೋಂಕಿತರಿಗೆ ಆಮ್ಲಜನಕ ಒದಗಿಸುವ ವಿಶಿಷ್ಟ ಸೌಲಭ್ಯವುಳ್ಳ 'ಆಕ್ಸಿಜನ್ ಆನ್ ವ್ಹೀಲ್ಸ್' ಬಸ್ ಸೇವೆ ಪರಿಚಯಿಸಿದ್ದೇವೆ ಎಂದಯ ಹೇಳಿದರು.
ಜಿಕೆವಿಕೆ ಆರೈಕೆ ಕೇಂದ್ರದಲ್ಲಿ 380 ಹಾಸಿಗೆಗಳನ್ನ ವ್ಯವಸ್ಥೆ ಮಾಡಲಾಗಿದೆ. ಈಗ ಬಹಳಷ್ಟು ಜನ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಲು ಬರುತ್ತಿದ್ದಾರೆ. ಒಟ್ಟು 1,600 ಹಾಸಿಗೆಗಳು ಕೋವಿಡ್ ಆರೈಕೆ ಕೇಂದ್ರದಲ್ಲಿ ಲಭ್ಯವಿವೆ ಎಂದು ಹೇಳಿದರು.
ಶವ ಸಂಸ್ಕಾರದ ವಿಚಾರದಲ್ಲಿ ಸಾಕಷ್ಟು ತೊಂದರೆಗಳು ಆಗುತ್ತಿರುವುದು ಸರ್ಕಾರಕ್ಕೂ ಸಾಕಷ್ಟು ಕಳವಳದ ಸಂಗತಿಯಾಗಿತ್ತು. ಇದಕ್ಕಾಗಿ ಸರ್ಕಾರದ ವತಿಯಿಂದ ಉಚಿತ ಶವ ವಾಹನದ ವ್ಯವಸ್ಥೆ ಮಾಡಲಾಗಿದೆ. ಚಿತಾಗಾರಕ್ಕೆ ಶವ ಕೊಂಡೊಯ್ಯಲು ಈ ಸೇವೆ ಲಭ್ಯವಿರಲಿದೆ. ಇದಕ್ಕಾಗಿ 24x7 ಸಹಾಯವಾಣಿ ತೆರೆಯಲಾಗಿದ್ದು, 19 ಸಿಬ್ಬಂದಿ ಮೂರು ಪಾಳೆಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇಲ್ಲಿಗೆ ಕರೆ ಮಾಡಿದರೆ ಸಿಬ್ಬಂದಿ ನಿಗದಿತ ಸಮಯ ನೀಡಿ, ಆ ಸಮಯಕ್ಕೆ ಶವವನ್ನ ಚಿತಾಗಾರಕ್ಕೆ ಸಾಗಿಸಲು ಉಚಿತ ಶವ ವಾಹನದ ವ್ಯವಸ್ಥೆ ಮಾಡಿಕೊಡುತ್ತಾರೆ. ಇದಕ್ಕಾಗಿ 8495998495ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.