ಬೆಂಗಳೂರು: ಗೌರಿ ಗಣೇಶ ಹಬ್ಬದ ಹಿನ್ನೆಲೆ ಟಿಕೆಟ್ ದರವನ್ನು ದುಪ್ಪಟ್ಟು ಹೆಚ್ಚಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಮತ್ತು ಅನುಮತಿಯ ಮಿತಿಗಿಂತ ಹೆಚ್ಚಿನ ಲಗೇಜ್ ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್‌ಗಳ ಮೇಲೆ ಆರ್ಟಿಒ ಅಧಿಕಾರಿಗಳು ಭಾನುವಾರ ರಾತ್ರಿ ದಾಳಿ ನಡೆಸಿದ್ದಾರೆ. ಹೆಚ್ಚುವರಿ ಟಿಕೆಟ್ ದರ ಪಡೆದ ಬಸ್‌ಗಳಿಗೆ ದಂಡ ವಿಧಿಸುತ್ತಿದ್ದಾರೆ. ಕೆಲವೆಡೆ ಪ್ರಯಾಣಿಕರಿಗೆ ಟಿಕೆಟ್‌ನ ಹೆಚ್ಚುವರಿ ಮೊತ್ತವನ್ನು ಹಿಂದಿರುಗಿಸಲಾಗುತ್ತಿದೆ.
ಹೆಚ್ಚು ಟಿಕೆಟ್ ದರ ಪಡೆದ ಬಸ್ ನಿರ್ವಾಹಕರು, ಏಜೆಂಟರ್ ಹಾಗೂ ಮಾಲೀಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹಬ್ಬ ಎಂದು ಮನಬಂದಂತೆ ಪ್ರಯಾಣ ದರ ಏರಿಸಿ ಗ್ರಾಹಕರ ಸುಲಿಗೆ ಮಾಡುವಂತಿಲ್ಲ. ಒಂದು ವೇಳೆ ಹೆಚ್ಚು ದರ ಪಡೆದರೆ ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿ, ರಹದಾರಿ ರದ್ಧತಿಗೆ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ (ಆರ್‌ಟಿಎ) ಶಿಫಾರಸು ಮಾಡುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ.
ಬಸ್‌ಗಳನ್ನು ಏಕಾಏಕಿ ನಿಲ್ಲಿಸುತ್ತಿರುವ ಅಧಿಕಾರಿಗಳು: ರಾಜ್ಯದ ವಿವಿಧ ಭಾಗಗಳಿಗೆ ತೆರಳುತ್ತಿದ್ದ ಬಸ್‌ಗಳನ್ನು ಏಕಾಏಕಿ ನಿಲ್ಲಿಸುತ್ತಿರುವ ಅಧಿಕಾರಿಗಳು ಬಸ್ ಒಳಗೆ ತೆರಳಿ ಪ್ರಯಾಣಿಕರ ಬಳಿ ಟಿಕೆಟ್ ದರದ ಬಗ್ಗೆ ವಿಚಾರಿಸುತ್ತಿದ್ದಾರೆ. ಬಳಿಕ ಹೆಚ್ಚು ಟಿಕೆಟ್ ದರ ಪಡೆದ ಬಸ್ ನಿರ್ವಾಹಕರು, ಏಜೆಂಟರ್ ಹಾಗೂ ಮಾಲೀಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.