ಬೆಂಗಳೂರು:ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರುಗಳು ತಮ್ಮ ಬಸ್‌ಗಳ ಟಿಕೆಟ್ ದರಗಳನ್ನು ಡಬಲ್ ಮಾಡಿದ್ದಾರೆ.
ಎಲೆಕ್ಷನ್ ಬಂತು, ಊರಿಗೆ ಹೋಗಿ ವೋಟ್ ಹಾಕಿ ಬರೋಣ ಅಂತ ಮುಂಚಿತವಾಗಿ ಬಸ್ ಸೀಟ್ ಟಿಕೆಟ್ ಬುಕ್ ಮಾಡಬೇಕು ಎಂದುಕೊಂಡವರು, ಬಸ್ ಟಿಕೆಟ್ ದರ ನೋಡಿ ಬೆಚ್ಚಿಬೀಳುತ್ತಿದ್ದಾರೆ. ನಿನ್ನೆ ಮೊನ್ನೆ 500, 600 ರೂ ಇದ್ದ ಟಿಕೆಟ್ ಬೆಲೆ ದರ ಇಂದು 1,300 ರೂಪಾಯಿ ಆಗಿದೆ. ಖಾಸಗಿ ಬಸ್‌ಗಳ ಈ ಟಿಕೆಟ್ ದಂಧೆಯಿಂದ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ವಿರುದ್ಧ ಕನ್ನಡ ಒಕ್ಕೂಟ ಅಧ್ಯಕ್ಷ ನಾಗೇಶ್ ಇಂದು ಚುನಾವಣಾ ಆಯೋಗ ಹಾಗು ಸಾರಿಗೆ ಇಲಾಖೆಗೆ ದೂರು ನೀಡಿದರು.