ಬೆಂಗಳೂರು:ಸಾಮಾನ್ಯ ದಿನಗಳಲ್ಲಿ 500ರಿಂದ 600 ರೂ.ಗಳು ಇರುತಿದ್ದ ಟಿಕೆಟ್ ದರಗೌರಿ- ಗಣೇಶ ಹಬ್ಬದ ಹಿನ್ನೆಲೆ 900 ರಿಂದ 1500 ರೂ.ವರೆಗೂ ಏರಿಸಲಾಗಿದೆ. ಮನಬಂದಂತೆ ದರಗಳನ್ನು ವಿಧಿಸಿ ಪ್ರಯಾಣಿಕರ ಕೆಂಗಣ್ಣಿಗೆ ಕಾರಣವಾಗಿದ್ದಾರೆ.
ಗೌರಿ- ಗಣೇಶ ಹಬ್ಬದ ಹಿನ್ನೆಲೆ ಖಾಸಗಿ ಬಸ್ ದರ ಏರಿಕೆ: ಸಾರ್ವಜನಿಕರ ಬೇಸರ - ಉದ್ಯೋಗ, ವ್ಯವಹಾರ
ಪ್ರತಿ ವರ್ಷ ಗೌರಿ ಗಣೇಶ ಹಬ್ಬ ಬಂತು ಅಂದರೆ ಅರ್ಧ ಬೆಂಗಳೂರು ಖಾಲಿಯಾಗುತ್ತೆ, ಉದ್ಯೋಗ, ವ್ಯವಹಾರದ ನಿಮಿತ್ತ ರಾಜ್ಯದ ನಾನಾ ಭಾಗಗಳಿಂದ ಬೆಂಗಳೂರಿನಲ್ಲಿ ಬಂದು ನೆಲೆಸಿದವರು ಹಬ್ಬಕ್ಕೆ ತಮ್ಮ ಊರಿಗೆ ಹೊರಟು ನಿಂತಿರುತ್ತಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಳ್ಳುವ ಖಾಸಗಿ ಬಸ್ಸಿನವರು, ಬಸ್‌ಗಳ ಪ್ರಯಾಣ ದರ ದುಪ್ಪಟ್ಟು ಮಾಡೋದೇ ಕಾಯಕ ಮಾಡಿಕೊಂಡಿದ್ದಾರೆ.

ಬಸ್‌ಗಳೆಲ್ಲವೂ ಫುಲ್ ಆಗಲಿದ್ದು, ಹಬ್ಬಕ್ಕೆ ಹೊರಟು ನಿಂತವರಿಗೆ ಬಸ್‌ಗಳಲ್ಲಿ ಸೀಟು ಕಾಯ್ದಿರಿಸುವುದೇ ಸವಾಲಾಗಿದೆ. ಕಾರಣ ಯಾವುದೇ ಆನ್‌ಲೈನ್ ಬುಕ್ಕಿಂಗ್ ವೆಬ್‌ಸೈಟ್‌ಗಳನ್ನು ನೋಡಿದರೂ ಬಸ್‌ಗಳು ಫುಲ್ ಎಂದು ತೋರಿಸುತ್ತಿದೆ. ಆಯಾ ಟ್ರಾವೆಲ್ಸ್‌ಗೆ ಕರೆ ಮಾಡಿದರೆ ದುಬಾರಿ ದರಗಳನ್ನು ಹೇಳುತ್ತಿದ್ದಾರೆ.
ಹಬ್ಬದ ಸೀಸನ್ ಬಂದಾಗ ಜನದಟ್ಟಣೆ ನಿಯಂತ್ರಿಸಲು ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತದೆ. ಅದೇ ರೀತಿ ಈ ಬಾರಿಯೂ ಹೆಚ್ಚುವರಿ ಬಸ್ ಬಿಟ್ಟಿದೆ. ಆದರೂ, ಖಾಸಗಿ ಬಸ್ಗಳಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಹತ್ತಾರು ಟ್ರಾವೆಲ್ಸ್ ಸಂಸ್ಥೆಗಳ ಬಸ್‌ಗಳು ಮಂಗಳೂರು, ಉಡುಪಿ, ಕುಂದಾಪುರ, ಶಿವಮೊಗ್ಗ, ಕಾರವಾರ, ಹುಬ್ಬಳ್ಳಿ ಸೇರಿದಂತೆ ನಾನಾ ಊರುಗಳಿಗೆ ಸಂಚರಿಸುತ್ತಿವೆ. ಇಂತಹ ಕಡೆಗಳಲ್ಲಿ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.