ಬೆಂಗಳೂರು: ಕೋವಿಡ್ ಹಿನ್ನೆಲೆ ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೂ ಮಾರ್ಚ್ 14 ರಿಂದ ರಜೆ ಘೋಷಿಸಲಾಗಿತ್ತು. ಕೊರೊನಾ ಕಂಟ್ರೋಲ್ ಆಗಿದ್ದರೆ ಜುಲೈ 1 ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ಸಮಯದಲ್ಲಿ ಪುನಾರಂಭಿಸಲು ಸಾಧ್ಯವಾಗಲಿಲ್ಲ. ಇತ್ತ ರಾಜ್ಯ ಸರ್ಕಾರದ ಆದೇಶದಂತೆ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆಯನ್ನ ಕೂಡ ಸರ್ಕಾರ ಮುಂದೂಡಿತ್ತು.
ಇದೀಗ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರ ಬೇಡಿಕೆ ಹಿನ್ನೆಲೆ ಪ್ರಥಮ ಹಂತವಾಗಿ ವಿದ್ಯಾರ್ಥಿಗಳು ಸರ್ಕಾರಿ, ಅನುದಾನಿತ, ಶಾಲೆಗಳಲ್ಲಿ ದಾಖಲಾಗಿರುವುದನ್ನು ಖಚಿತ ಪಡಿಸಬೇಕಿದೆ. ಹೀಗಾಗಿ, ಖಾಸಗಿ ಅನುದಾನ ರಹಿತ ಶಾಲೆಗಳು "ಮೊದಲನೇ ಕಂತಿನ ಅಧಿಕೃತ ಶುಲ್ಕವನ್ನು" ಮಾತ್ರ ಪೋಷಕರಿಂದ ಪಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಆದರೆ ಯಾವುದೇ ಕಾರಣಕ್ಕೂ ಕಳೆದ ವರ್ಷ ಪಡೆದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನ ಪಡೆಯದಂತೆ ಸೂಚಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಪೋಷಕರು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಪ್ರಸ್ತುತ ವರ್ಷದ ಶುಲ್ಕವನ್ನು ಹಿಂದಿನ ಸಾಲಿನ ಶುಲ್ಕಕ್ಕಿಂತ ಕಡಿಮೆ ಮಾಡಲು ಆಡಳಿತ ಮಂಡಳಿಗೆ ಮುಕ್ತ ಅವಕಾಶ ಕಲ್ಪಿಸಿದೆ.
ಇತ್ತ ಸರ್ಕಾರದ ವಿದ್ಯಾಗಮ, ಸಂವೇದನಾ ಕಾರ್ಯಕ್ರಮಗಳಂತೆ ಖಾಸಗಿ ಅನುದಾನರಹಿತ ಶಾಲೆಗಳು ಪರ್ಯಾಯ ಕಲಿಕೆಯನ್ನು ಮುಂದುವರೆಸಬಹುದು. ಆದರೆ ಈ ಪರ್ಯಾಯ ಕಾರ್ಯಕ್ರಮಕ್ಕೆ ಯಾವುದೇ ಹೆಚ್ಚುವರಿ ಹಣ ಪಡೆಯುವಂತಿಲ್ಲ ಎಂದು ಸೂಚಿಸಿದೆ.
ಇನ್ನು ಅನುದಾನ ರಹಿತ ಶಾಲೆಗಳು ಪಡೆಯುವ ಶುಲ್ಕದ ಮೊತ್ತವನ್ನ ಮೊದಲ ವೆಚ್ಚವನ್ನಾಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರಿಗೆ ವೇತನವನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು ಹಾಗೂ ಈ ಬಗ್ಗೆ ದೂರು ಬಾರದಂತೆ ನೋಡಿಕೊಳ್ಳುವುದು ಎಂದು ಸೂಚಿಸಲಾಗಿದೆ.