ಬೆಂಗಳೂರು:ವಿವಿಧ ಅಪರಾಧವೆಸಗಿ ಸಜೆ ಅನುಭವಿಸುತ್ತಿರುವ ಸಜಾಬಂಧಿಗಳು ಇದೀಗ ರಂಗ ಕಲಾವಿದರಾಗಲಿದ್ದಾರೆ. ಬಣ್ಣ ಹಚ್ಚಿ ಪಾತ್ರಕ್ಕೆ ತಕ್ಕಂತೆ ಉಡುಗೆ ತೊಟ್ಟು ಪೇಕ್ಷಕರಿಂದ ಚಪ್ಪಾಳೆ ತಟ್ಟಿಸಿಕೊಳ್ಳಲು ಸನ್ನದ್ಧರಾಗಿದ್ದಾರೆ.
ಅಕ್ರಮ ಚಟುವಟಿಕೆಗಳ ತಾಣ ಎಂದು ಕುಖ್ಯಾತಿಯಾಗಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮನ ಪರಿವರ್ತನೆಗಾಗಿ ಹಾಗೂ ಧನಾತ್ಮಕ ಚಿಂತನೆಯತ್ತ ಒಲವು ಮೂಡಿಸಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ. ಹಲವು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿರುವ ಹಾಗೂ ಕಲಾ ರಂಗದಲ್ಲಿ ಆಸಕ್ತಿ ಹೊಂದಿರುವ ಆಯ್ದ, ಶಿಕ್ಷಾ ಬಂಧಿಗಳನ್ನು ತಯಾರುಗೊಳಿಸಿ ನಾಟಕ ಆಡಿಸುವ ಸಂಪ್ರದಾಯವನ್ನ ಮತ್ತೆ ಅಧಿಕಾರಿಗಳು ಮುಂದುವರೆಸಿದ್ದಾರೆ.
ನಾಟಕ ಪ್ರದರ್ಶನ: 2018ರಲ್ಲಿ ಬೆಂಗಳೂರು ಸೆಂಟ್ರಲ್ ಜೈಲಿನ ಕೈದಿಗಳು ಎರಡು ವಿಶೇಷ ತಂಡ ಕಟ್ಟಿಕೊಂಡು ಸೂಕ್ತ ತರಬೇತಿ ಪಡೆದು 'ಜೊತೆಗಿರುವೆನು ಚಂದಿರ' ಎಂಬ ಹೆಸರಿನ ಸಾಮಾಜಿಕ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ್ದರು. ನಾಟಕಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರಮುಖವಾಗಿ ಕೈದಿಗಳ ನಡತೆಯಲ್ಲಿ ನಾಟಕದಿಂದಾಗಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿತ್ತು.
ಆಸಕ್ತ ಕೈದಿಗಳಿಗಾಗಿ ಹುಡುಕಾಟ: ಇದಾದ ಕೆಲವೇ ತಿಂಗಳಲ್ಲಿ ಅನ್ಯ ಕಾರಣಕ್ಕಾಗಿ ನಾಟಕ ನಿಲ್ಲಿಸಲಾಗಿತ್ತು. ಕೊರೊನಾ ಬಿಕ್ಕಟ್ಟು ಹಿನ್ನೆಲೆ ನಾಟಕ ಪ್ರದರ್ಶನಕ್ಕೆ ಅವಕಾಶವಿರಲ್ಲಿಲ್ಲ. ಇದೀಗ ಮತ್ತೆ ಕಲಾರಂಗದಲ್ಲಿ ಆಸಕ್ತಿಯಿರುವ ಸಜಾಬಂಧಿಗಳನ್ನು ಗುರುತಿಸಿ ನಾಟಕವಾಡಿಸುವ ಚಿಂತನೆ ನಡೆಸಲಾಗುತ್ತಿದೆ.
ಇದಕ್ಕಾಗಿ ಸೂಕ್ತ ಹಾಗೂ ಆಸಕ್ತ ಕೈದಿಗಳಿಗಾಗಿ ಜೈಲಿನಲ್ಲಿ ತಲಾಶ್ ನಡೆಸಲಾಗುತ್ತಿದೆ ಎಂದು ಈಟವಿ ಭಾರತಕ್ಕೆ ಜೈಲು ಮುಖ್ಯ ಅಧೀಕ್ಷಕ ರಮೇಶ್ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪಶ್ಚಾತ್ತಾಪ ಕೇಂದ್ರವಾಗಬೇಕಿದ್ದ ಬೆಂಗಳೂರು ಸೆಂಟ್ರಲ್ ಜೈಲು, ಇದೀಗ ಅಕ್ರಮದ ಅಡ್ಡೆಯಾಗಿ ಪರಿವರ್ತನೆಯಾಗಿದೆ. ಡ್ರಗ್ಸ್ ಸೇವನೆ, ಮೊಬೈಲ್ ಬಳಕೆ ಸೇರಿದಂತೆ ಇನ್ನಿತರ ಅನೈತಿಕ ಚಟುವಟಿಕೆಗಳಲ್ಲಿ ಕೈದಿಗಳು ನಿರಂತರವಾಗಿ ಭಾಗಿಯಾಗುತ್ತಿದ್ದಾರೆ. ಅಕ್ರಮ ಹೆಚ್ಚಾದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಿಬ್ಬಂದಿಗೆ ಜೈಲಿನಲ್ಲಿಯೂ ಬಾಡಿವೋರ್ನ್ ಕ್ಯಾಮರ ಪರಿಚಯಿಸಲಾಗಿದೆ.
ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಹತ್ಯೆಗೆ ಖಂಡನೆ: ಬೆಂಗಳೂರಿನ ಟೌನ್ಹಾಲ್ ಬಳಿ ಹಿಂದೂ ಸಂಘಟನೆಗಳ ಪ್ರತಿಭಟನೆ
ಶಿಕ್ಷಾಬಂಧಿಗಳ ಬೌದ್ದಿಕ ಹಾಗೂ ದೈಹಿಕ ಬೆಳವಣಿಗೆಗಾಗಿ ಯೋಗ ಹಾಗೂ ಕ್ರೀಡಾ ಚಟುವಟಿಕೆ, ಪ್ರತಿಭಾ ಕಾರಂಜಿ ಹಾಗೂ ಸಾಂಸ್ಕೃತಿಕ ಚಟುವಟಿಕೆ ನಡೆಯುತ್ತಿವೆ. ವಿಶೇಷ ಆಸಕ್ತಿವಿರುವ ಸುಮಾರು 30 ಕೈದಿಗಳ ತಂಡ ಇಟ್ಟುಕೊಂಡು ಅನುಭವಿ ರಂಗಭೂಮಿ ಕಲಾವಿದರಿಂದ ತರಬೇತಿ ಕೊಡಿಸಲು ಮುಂದಾಗಿದೆ. ಆರಂಭಿಕ ಹಂತದಲ್ಲಿ ಹಬ್ಬ- ಹರಿದಿನಗಳಲ್ಲಿ ಜೈಲಿನಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ನಂತರ ರವೀಂದ್ರ ಕಲಾಕ್ಷೇತ್ರ ಸೇರಿದಂತೆ ರಂಗಮಂದಿರಗಳಲ್ಲಿ ನಾಟಕವಾಡಿಸುವ ಚಿಂತನೆ ನಡೆಸಲಾಗುತ್ತಿದೆ.
ಅಂತರ್ ಜೈಲು ಕ್ರೀಡೆ ಆಯೋಜನೆ: ಸುಸ್ಥಿರ ಆರೋಗ್ಯ ಹಾಗೂ ದೈಹಿಕ ಸದೃಢಕ್ಕಾಗಿ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ಮೊದಲ ಬಾರಿಗೆ ಅಂತರ ಜೈಲು ಕ್ರೀಡಾ ಸ್ಫರ್ಧೆ ಆಯೋಜನೆಗೆ ಮುಂದಾಗಿದ್ದಾರೆ. ಕಿಕ್ರೆಟ್, ವಾಲಿಬಾಲ್, ಚೆಸ್, ಕೇರಂಬೋರ್ಡ್ ಸೇರಿದಂತೆ ಹೊರ ಹಾಗೂ ಒಳಾಂಗಣ ಕ್ರೀಡೆ ಆಯೋಜನೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಪ್ರಾರಂಭದಲ್ಲಿ ಜೈಲಿನಲ್ಲಿ ವಿವಿಧ ತಂಡ ರಚಿಸಿ ಕ್ರೀಡಾ ಚಟುವಟಿಕೆ ನಡೆಸಲಾಗುವುದು. ನಂತರ ಉತ್ಕೃಷ್ಟ ತಂಡ ರಚಿಸಲಾಗುವುದು. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಅಂತರ ಜೈಲುಮಟ್ಟದಲ್ಲಿ ಸ್ಪರ್ಧೆ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯ ಅಧೀಕ್ಷಕ ರಮೇಶ್ ತಿಳಿಸಿದ್ದಾರೆ.