ಬೆಂಗಳೂರು:ಪ್ರತಿ ಗ್ರಾಮ ಪಂಚಾಯಿತಿಗಳ ವಿವೇಚನೆಗೆ ತಕ್ಕಂತೆ ಆಸ್ತಿ ನಿರ್ವಹಣೆ ಮಾಡುವ ಸಲುವಾಗಿ ದುಪ್ಪಟ್ಟು ಅನುದಾನ ಎರಡು ಸಾವಿರ ಕೋಟಿ ರೂ ನೀಡಲಾಗುತ್ತಿದೆ. ರಾಜಕೀಯ ವಿಕೇಂದ್ರಿಕರಣದ ಜತೆಗೆ ಆರ್ಥಿಕ ವಿಕೇಂದ್ರೀಕರಣವನ್ನೂ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆಯೋಜಿಸಿದ್ದ 2019-2020, 2020-2021 ಹಾಗೂ 2021-2022ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಮಹಾತ್ಮಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪಂಚತಂತ್ರ 2.0 ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ ತೆರಿಗೆ ಸಂಗ್ರಹದ ಉಪಕರಣಗಳ ಲೋಕಾರ್ಪಣೆ ಮತ್ತು ಜಲಶಕ್ತಿ ಅಭಿಯಾನಕ್ಕೆ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ಜನರ ಸುತ್ತಲೂ ಅಭಿವೃದ್ಧಿಯಾಗಬೇಕು. ಅಭಿವೃದ್ಧಿಗಾಗಿ ಜನ ಓಡಾಡುವಂತಾಗಬಾರದು. ಜನರಿದ್ದಲ್ಲಿ ಆಡಳಿತ, ಅಭಿವೃದ್ಧಿಯಾಗಬೇಕು. ಬಾಪೂಜಿ ಕೇಂದ್ರದ ತಂತ್ರಾಂಶಗಳ ಮೂಲಕ ಇನ್ನಷ್ಟು ವೇಗವಾಗಿ ಕೆಲಸಗಳನ್ನು ಮಾಡಲು ಬಾಪೂಜಿ 2 ಯಿಂದ ಅನುಕೂಲವಾಗಲಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಬಲವರ್ಧನೆಗೆ ಆದ್ಯತೆ : ಇದರ ಜತೆಗೆ ಸೇವಾ ಭತ್ಯೆಗಳನ್ನು ಒಂದು ಸಾವಿರದಿಂದ 2 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅಧ್ಯಕ್ಷರಿಗೆ ಆರು ಸಾವಿರ ದೊರೆಯುವಂತೆ ಮಾಡಲಾಗಿದೆ. ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬಹಳಷ್ಟು ಮಹತ್ವ ನೀಡಿದೆ. ಬರುವ ದಿನಗಳಲ್ಲಿ ಇದಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಲಾಗುವುದು. ಜನರಿಗೆ ಅತ್ಯಂತ ಹತ್ತಿರವಿರುವ ಸರ್ಕಾರ ಗ್ರಾಮ ಪಂಚಾಯಿತಿಯನ್ನು ಬಲಪಡಿಸಲಾಗುವುದು ಎಂದರು.