ಬೆಂಗಳೂರು :ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಅತ್ಯಂತ ಪ್ರಚೋದನಕಾರಿಯಾದುದು, ಮಾತ್ರವಲ್ಲ ಸಂವಿಧಾನ ವಿರೋಧಿಯಾದುದು. ಈ ಪ್ರಚೋದನಕಾರಿ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ನಾನು ಆಗ್ರಹಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ವಿಷಯ - ವಿದ್ಯಮಾನಗಳೇನೇ ಇರಲಿ, ಯಾರಾದರೂ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದರ ಬದಲಿಗೆ ತಕ್ಕ ಪ್ರತ್ಯುತ್ತರ ನೀಡಿ ಎಂದು ಜನರನ್ನು ಪ್ರಚೋದಿಸುವುದು, ಕಾನೂನನ್ನು ಕೈಗೆತ್ತಿಕೊಳ್ಳಲು ನೀಡುವ ಕರೆಯಾಗುತ್ತದೆ. ಇದನ್ನು ಪ್ರಧಾನಿ ಮಾಡಿದರೂ ಅಪರಾಧವೇ ಆಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಬಿಜೆಪಿಯ ನಾಯಕರಲ್ಲ, ಅವರು ಸಾಂವಿಧಾನಿಕ ಹುದ್ದೆಯಾದ ಪ್ರಧಾನಮಂತ್ರಿಯ ಕುರ್ಚಿಯಲ್ಲಿ ಕುಳಿತಿರುವವರು. ಹೀಗಿರುವಾಗ ಅವರ ನಡೆ - ನುಡಿ ಮತ್ತು ಕ್ರಿಯೆ - ಪ್ರತಿಕ್ರಿಯೆ ಆ ಸ್ಥಾನದ ಘನತೆ - ಗೌರವ ಮತ್ತು ಜವಾಬ್ದಾರಿಗಳಿಗೆ ತಕ್ಕಂತೆ ಇರಬೇಕಾಗಿರುವುದು ರಾಜಧರ್ಮವಾಗಿದೆ ಎಂದಿದ್ದಾರೆ.
ನರೇಂದ್ರ ಮೋದಿ ಅವರು ಇನ್ನೂ ಆರ್.ಎಸ್.ಎಸ್ನ ತನ್ನ ಪೂರ್ವಾಶ್ರಮದ ಗುಂಗಿನಲ್ಲಿದ್ದಂತೆ ಕಾಣುತ್ತಿದೆ. ತಾನು ಈ ದೇಶದ 140 ಕೋಟಿ ಜನರಿಗೂ ಪ್ರಧಾನಿ ಎನ್ನುವುದನ್ನು ಮರೆತಂತಿದೆ. ಪ್ರಧಾನಿಯವರ ಇಂತಹ ಹೇಳಿಕೆಗಳಿಂದ ಪ್ರಚೋದಿತರಾಗಿ ಅವರದ್ದೇ ಪಕ್ಷ ಮತ್ತು ಸಂಘಟನೆಯ ಅನೇಕ ನಾಯಕರು ಹಿಂಸಾಚಾರಕ್ಕೆ ಕರೆನೀಡುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.