ಬೆಂಗಳೂರು: ನಾಳೆಯಿಂದ ಐದು ದಿನಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾದ ಏರ್ ಶೋ ನಡೆಯಲಿದ್ದು, ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋ ಉದ್ಘಾಟನೆಗಾಗಿ ಇಂದು ರಾತ್ರಿಯೇ ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಆಗಮಿಸಲಿದ್ದಾರೆ. ಇಂದು ಸಂಜೆ 7.40ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ 8 ಗಂಟೆಗೆ ರಾಜಭವನ ತಲುಪಲಿದ್ದಾರೆ.
ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಹೆಲಿಕಾಪ್ಟರ್ ಮೂಲಕ ಹೊರಡಲಿರುವ ಮೋದಿ 9.20ಕ್ಕೆ ಯಲಹಂಕ ವಾಯುನೆಲೆ ತಲುಪಲಿದ್ದಾರೆ. ನಂತರ 9.30ಕ್ಕೆ ಕಾರ್ಯಕ್ರಮ ಸ್ಥಳ ತಲುಪಲಿದ್ದಾರೆ. 9.30ಕ್ಕೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಉದ್ಘಾಟನೆ ಮಾಡಲಿದ್ದು, 10.30 ರವರೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. 10.30 ರಿಂದ 11.30 ರವರೆಗೆ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಿ ಇಂಡಿಯಾ ಪೆವಿಲಿಯನ್, ಕರ್ನಾಟಕ ಪೆವಿಲಿಯನ್ಗೆ ಭೇಟಿ ನೀಡಲಿದ್ದಾರೆ. 11.45ಕ್ಕೆ ಯಲಹಂಕ ವಾಯುನೆಲೆಯಿಂದ ನಿರ್ಗಮಿಸಲಿದ್ದು, ನಂತರ ಅವರು 3.15ಕ್ಕೆ ತ್ರಿಪುರಕ್ಕೆ ಭೇಟಿ ನೀಡಲಿದ್ದಾರೆ.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 1996 ರಿಂದ ಆರಂಭಗೊಂಡಿರುವ ಏರ್ ಶೋ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದು, ಈವರೆಗೆ ಒಟ್ಟು 13 ಆವೃತ್ತಿಗಳು ನಡೆದಿದ್ದು, ಇದು 14ನೇ ಆವೃತ್ತಿಯಾಗಿದೆ. ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಒಟ್ಟು 809 ವೈಮಾನಿಕ ವಲಯದ ಪ್ರದರ್ಶಕರು ರಕ್ಷಣಾ ವಲಯಕ್ಕೆ ಸೇರಿದ ಪರಿಕರಗಳ ಪ್ರದರ್ಶನ ಮಾಡಲಿದ್ದು, ಇದರಲ್ಲಿ 699 ಭಾರತೀಯ ಪ್ರದರ್ಶಕರು ಮತ್ತು 110 ವಿದೇಶಿ ಪ್ರದರ್ಶಕರು ಭಾಗಿಯಾಗಲಿದ್ದಾರೆ. 25 ದೇಶಗಳ ರಕ್ಷಣಾ ಸಚಿವರು ಏರ್ ಶೋನಲ್ಲಿ ಭಾಗಿಯಾಗುತ್ತಿರುವುದು ವಿಶೇಷವಾಗಿದೆ.