ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ರೋಡ್ ಶೋ ರದ್ದುಗೊಂಡಿದ್ದು, ರಸ್ತೆ ಮಾರ್ಗದ ಬದಲು ವಾಯುಮಾರ್ಗದಲ್ಲೇ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಒಂದು ಹೆಚ್ಚುವರಿ ಕಾರ್ಯಕ್ರಮವನ್ನು ಇದೀಗ ಸೇರ್ಪಡೆ ಮಾಡಲಾಗಿದೆ.
ಯಲಹಂಕ ವಾಯುನೆಲೆಯಿಂದ ಕೊಮ್ಮಘಟ್ಟ ಮತ್ತು ಕೊಮ್ಮಘಟ್ಟದಿಂದ ಬೇಸ್ ಕ್ಯಾಂಪಸ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಸಬೇಕು ಎನ್ನುವ ರಾಜ್ಯ ಬಿಜೆಪಿ ಆಶಯಕ್ಕೆ ಎಸ್ಜಿಪಿ ತಣ್ಣೀರೆರಚಿದೆ. ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ನಡೆಸಲು ಅವಕಾಶ ನಿರಾಕರಿಸಿದೆ. ರೋಡ್ ಶೋ ಪ್ರಸ್ತಾಪವನ್ನು ಪರಿಶೀಲಿಸುವುದಾಗಿ ತಿಳಿಸಿದ್ದ ಎಸ್ಜಿಪಿ ಭದ್ರತೆ ಕಾರಣದಿಂದ ಅನುಮತಿ ನೀಡಿಲ್ಲ. ಅಲ್ಲದೆ, ಬೆಂಗಳೂರಿನ ಕಾರ್ಯಕ್ರಮಗಳಿಗೆ ರಸ್ತೆ ಮಾರ್ಗದಲ್ಲಿ ತೆರಳದೆ ವಾಯುಮಾರ್ಗದಲ್ಲೇ ತೆರಳಲು ವ್ಯವಸ್ಥೆ ಮಾಡಿದೆ. ಒಂದು ಕಾರ್ಯಕ್ರಮದಿಂದ ಮತ್ತೊಂದು ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕವೇ ಪ್ರಯಾಣಿಸಲಿದ್ದಾರೆ.
ಜೂನ್ 20ರಂದು ಬೆಳಗ್ಗೆ 11.55 ಕ್ಕೆ ಪ್ರಧಾನಿ ಮೋದಿ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದು, ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಐಐಎಸ್ಸಿಗೆ ಆಗಮಿಸಲಿದ್ದಾರೆ. ಈ ಮೊದಲು ಸಿದ್ಧವಾಗಿದ್ದ ಕಾರ್ಯಕ್ರಮ ಪಟ್ಟಿಯಲ್ಲಿ ಐಐಎಸ್ಸಿ ಕಾರ್ಯಕ್ರಮ ಇರಲಿಲ್ಲ, ಹೊಸದಾಗಿ ಈ ಕಾರ್ಯಕ್ರಮ ಸೇರ್ಪಡೆಯಾಗಿದೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೊಮ್ಮಘಟ್ಟಕ್ಕೆ ಆಗಮಿಸಲಿದ್ದು, ಅದಕ್ಕಾಗಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ನಂತರ ಹೆಲಿಕಾಪ್ಟರ್ ಮೂಲಕ 'ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿ' (ಬೇಸ್)ಗೆ ತೆರಳಲಿದ್ದು, ಅಲ್ಲಿಯೂ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಅಲ್ಲಿ ನೂತನ ಕ್ಯಾಂಪಸ್ ಉದ್ಘಾಟಿಸಿ, ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿದ್ದಾರೆ.
ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮವನ್ನು ಪಕ್ಷಕ್ಕೆ ಅನುಕೂಲಕರವಾಗಿ ಬಳಸಿಕೊಳ್ಳಲು ರೋಡ್ ಶೋ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಇದೀಗ ನಿರಾಶೆಯಾಗಿದೆ.
ಇದನ್ನೂ ಓದಿ:ಹಿಂದುಳಿದ ವರ್ಗದ ಸಬಲೀಕರಣಕ್ಕೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ