ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಹಾಗು ಬೆಳಗಾವಿ ರೈಲ್ವೆ ನಿಲ್ದಾಣ ಉದ್ಘಾಟನೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27 ರಂದು ಒಂದು ದಿನದ ಮಟ್ಟಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಮೋದಿ ಕಾರ್ಯಕ್ರಮ ಸಿದ್ಧತೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶೀಲನೆ ನಡೆಸಿದರು.
ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಹಾಗು ಬೆಳಗಾವಿಗೆ ಆಗಮಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲಾ ಮುಖಂಡರ ಜೊತೆ ಪೂರ್ವಭಾವಿ ಸಭೆ ನಡೆಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತಿಯಲ್ಲಿ ಬೆಳಗಾವಿ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮ ಹಿಂದೆಯೇ ನಿಗದಿಯಾಗಿದ್ದು, ಎಲ್ಲಾ ಸಿದ್ಧತೆಗಳು ನಡೆದಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಬಿಟ್ಟು ಬೆಳಗಾವಿ ಕಾರ್ಯಕ್ರಮಗಳಿಗೆ ಸೀಮಿತವಾಗಿ ಸಿಎಂ ಸಭೆ ನಡೆಸಿದರು. ಮೊದಲು ಶಿವಮೊಗ್ಗ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ ನಂತರ ಬೆಳಗಾವಿಗೆ ತೆರಳಲಿದ್ದಾರೆ. 27 ರ ಮಧ್ಯಾಹ್ನ 2.15 ರಿಂದ 3.30ರವರೆಗೆ ಬೆಳಗಾವಿಯಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಸಲು ನಿರ್ಧರಿಸಿದ್ದು. ಸಾವಗಾವ್, ಜಿಲ್ಲಾ ಕ್ರೀಡಾಂಗಣ, ಮಾಲಿನಿ ಗಾರ್ಡನ್, ಸಿಪಿಎಡ್ ಮೈದಾನಗಳಲ್ಲಿ ಯಾವ ಜಾಗದಲ್ಲಿ ಸಮಾವೇಶ ನಡೆಸಬೇಕು ಎನ್ನುವ ಕುರಿತು ಚರ್ಚಿಸಲಾಯಿತು.
ಈ ಭೇಟಿಯ ವೇಳೆಯಲ್ಲೇ ಬೆಳಗಾವಿ ರೈಲು ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ ರೈತ ಸನ್ಮಾನ ನಿಧಿಯ ಎರಡನೇ ಕಂತಿನ ಹಣ ಬಿಡುಗಡೆಗೂ ಚಾಲನೆ ನೀಡಲಿದ್ದಾರೆ ಹಾಗಾಗಿ ಈ ಕಾರ್ಯಕ್ರಮಗಳ ಸಿದ್ದತೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪರಿಶೀಲನೆ ನಡೆಸಿದರು.
ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆ, ಸಿಎಂಗೆ ಅಭಿನಂದನೆ:ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಕ್ರಮ ಸಂಖ್ಯೆ 8 (ಜೆ) ನಲ್ಲಿ ಬರುವ ಹಡಪದ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ 'ಕರ್ನಾಟಕ ಹಡಪದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಡಪದ ಸಮಾಜದ ಮುಖಂಡರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಜರಿದ್ದರು.
ಕಾಫಿ ಪ್ಲಾಂಟೇಷನ್ ಒತ್ತುವರಿ ಕಂದಾಯ ಜಮೀನು ಗುತ್ತಿಗೆ ನಿಯಮ:ಕಾಫಿ ಪ್ಲಾಂಟೇಷನ್ ಬೆಳೆಗಾರರಿಗೆ ರಾಜ್ಯ ಸರ್ಕಾರ ಒತ್ತುವರಿ ಕಂದಾಯ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಲು ನಿಯಮ ರೂಪಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.