ಬೆಂಗಳೂರು: ಕಮಿಷನ್ ಆರೋಪದಿಂದ ಸಚಿವ ಸ್ಥಾನ ಕಳೆದುಕೊಂಡ ಕೆ ಎಸ್ ಈಶ್ವರಪ್ಪಗೆ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ 40 ಕಮಿಷನ್ ಆರೋಪವನ್ನು ಅನುಮೋದಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಕಚೇರಿ ದೊಡ್ಡ ಅಪರಾಧ ಎಸಗಿದೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೆ ಎಸ್ ಈಶ್ವರಪ್ಪಗೆ ಕರೆ ಮಾಡಿದ್ದಾರೆ. ಇದು ಭಾರತ ಇತಿಹಾಸ, ಕರ್ನಾಟಕದ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯಲಿದೆ. ಕರೆ ಮಾಡುವ ಮೂಲಕ ಪಿಎಂ ಶೇ 40ರಷ್ಟು ಭ್ರಷ್ಟಾಚಾರಕ್ಕೆ ಅನುಮೋದನೆ ನೀಡಿದ್ದಾರೆ. ಪಿಎಂ ಮೋದಿ ರಾಜಕೀಯ ಲಾಭಕ್ಕಾಗಿ ಯಾವುದೇ ಹಂತಕ್ಕೂ ಇಳಿಯಬಹುದು. ಕೆ ಎಸ್ ಈಶ್ವರಪ್ಪ ಅವರಿಗೆ ಕರೆ ಮಾಡಿ ಅದನ್ನು ಸಾಬೀತು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕೆ ಎಸ್ ಈಶ್ವರಪ್ಪ ಜೊತೆ ಮೋದಿ ಮಾತನಾಡಿದ್ದಾರೆ: ಈಶ್ವರಪ್ಪ ಜೊತೆ ಕರೆ ಮಾಡಿ, ನಗು ನಗುತ್ತಾ ಮಾತನಾಡಿದ್ದಾರೆ. ಈಶ್ವರಪ್ಪ ಕಮಿಷನ್ ಆರೋಪದಲ್ಲಿ ಮಂತ್ರಿಗಿರಿಯಿಂದ ವಜಾ ಮಾಡಿಲ್ಲವೇ?. ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಪತ್ನಿ ಜೊತೆ ಮಾತನಾಡಿದ್ದಾರಾ?. ಅವರ ತಂದೆ ತಾಯಿ ಜೊತೆ ಮಾತನಾಡಿದ್ದಾರಾ?. ಪ್ರಧಾನಿ ಅವರ ಮನೆಗೆ ಹೋಗಿದ್ದಾರಾ?. ಈಶ್ವರಪ್ಪ ಬಿಜೆಪಿ ಮುಖಂಡರಾಗಿರಬಹುದು, ಪ್ರಕರಣ ಕೋರ್ಟ್ನಲ್ಲಿದೆ. ಆದರೆ, ಗುತ್ತಿಗೆದಾರ ಸಂತೋಷ್, ಈಶ್ವರಪ್ಪ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಜೊತೆ ಮೋದಿ ಮಾತನಾಡಿದ್ದಾರೆ ಎಂದು ಕಿಡಿ ಕಾರಿದರು.