ಬೆಂಗಳೂರು:ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರುನಾಮಕರಣ ಮಾಡಿ ಆದೇಶಿಸಲಾಗಿದೆ. 12ನೇ ತರಗತಿವರೆಗಿನ ಶಿಕ್ಷಣ ಶಾಲಾ ಶಿಕ್ಷಣ ವ್ಯಾಪ್ತಿಗೆ ಒಳಪಡುತ್ತದೆ ಎಂಬುದನ್ನು 'ರಾಷ್ಟ್ರೀಯ ಶಿಕ್ಷಣ ನೀತಿ-2020'ರಲ್ಲಿ ತಿಳಿಸಿರುವ ಹಿನ್ನೆಲೆಯಲ್ಲಿ ಮರುನಾಮಕರಣ ಮಾಡಲಾಗಿದೆ.
ಆದೇಶದಲ್ಲಿ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ 12ನೇ ತರಗತಿಯವರೆಗಿನ ಶಿಕ್ಷಣವು ಶಾಲಾ ಶಿಕ್ಷಣದ ವ್ಯಾಪ್ತಿಗೊಳಪಡುತ್ತದೆ. 'ರಾಷ್ಟ್ರೀಯ ಶಿಕ್ಷಣ ನೀತಿ-2020'ರಲ್ಲಿಯೂ ಸಹ ಈ ಅಂಶವನ್ನು ಪುನರುಚ್ಚರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ (ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನೊಳಗೊಂಡಂತೆ) ಪದನಾಮವನ್ನು ಶಾಲಾ ಶಿಕ್ಷಣ ಇಲಾಖೆ ಎಂದು ಬದಲಾಯಿಸುವುದು ಸೂಕ್ತ ಎಂದು ವಿವಿಧ ಹಂತದ ಚರ್ಚೆಯಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದರು.