ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಕೋರಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಗೆ ಮನವಿ ಪತ್ರ ಸಲ್ಲಿಸಿತು.
ವಿಕಾಸಸೌಧದಲ್ಲಿ ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್, ಸಚಿವೆಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರದಲ್ಲಿ ದೇವಾಲಯಗಳಲ್ಲಿ ಮೊಬೈಲ್ ಬಳಕೆ ತುಂಬಾ ಅಪಾಯಕಾರಿಯಾಗಿರುತ್ತದೆ. ದೇವಾಲಯದಲ್ಲಿ ನಡೆಯುತ್ತಿರುವ ಧಾರ್ಮಿಕ ಆಚರಣೆಯ ಮಧ್ಯದಲ್ಲಿ ಅಶ್ಲೀಲವಾದ ರಿಂಗ್ ಟೋನ್‌ಗಳ ಕಿರಿಕಿರಿ, ಭಕ್ತರು ಧ್ಯಾನಾಸ್ತಕರಾಗಿ ಧ್ಯಾನ ಮಾಡುವಾಗ ಕೆಲವು ಹೆಣ್ಣು ಮಕ್ಕಳ ಫೋಟೋ ತೆಗೆಯುವುದು, ಜೋರಾಗಿ ಮಾತನಾಡುವುದು, ದೇವರ ಫೋಟೋ ತೆಗೆಯುವುದು, ಆರ್ಚನೆ ಮಾಡುತ್ತಿರುವಾಗ ಮಂತ್ರಗಳ ಉಚ್ಛಾರಣೆ ಮಾಡುವಾಗ ಮೊಬೈಲ್‌ನಲ್ಲಿ ಹಾಡುಗಳನ್ನು ಹಾಕುವುದು, ದೇವರ ಮೇಲಿರುವ ಆಭರಣಗಳ ಫೋಟೋ, ಇತ್ತೀಚೆಗೆ ಸಲ್ಫೀ ಫೋಟೋ, ದೇವರ ಗರ್ಭಗುಡಿಗೆ ಬೆನ್ನು ಹಾಕಿ ಫೋಟೋ ತೆಗೆಯುವುದು, ದೇವಾಲಯಗಳ ಆವರಣದಲ್ಲಿ ಇಟ್ಟಿರುವ ಹುಂಡಿಗಳ ಫೋಟೋ ತೆಗೆಯುವುದು ಹೆಚ್ಚಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.