ಬೆಂಗಳೂರು:ನಾಳೆ ವರಮಹಾಲಕ್ಷ್ಮಿ ಹಬ್ಬವಿದ್ದು, ಇದರ ಅದ್ಧೂರಿ ಆಚರಣೆಗೆ ಸಿಲಿಕಾನ್ ಸಿಟಿ ಜನರು ಸಜ್ಜಾಗುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದರೂ, ನಗರದ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಗುರುವಾರ ಬೆಳಗ್ಗೆಯಿಂದಲೇ ಜನರು ಸಿಟಿ ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರಂ ಸೇರಿದಂತೆ ಇತರ ಪ್ರಮುಖ ಮಾರುಕಟ್ಟೆಗಳಲ್ಲಿ ಜಮಾಯಿಸಿದ್ದಾರೆ.
ಮಾರ್ಕೆಟ್ಗಳಲ್ಲಿ ಭಾರಿ ಜನಸಂದಣಿ ಕಂಡು ಬಂದಿದ್ದು, ಕೆ ಆರ್ ಮಾರುಕಟ್ಟೆ ಮತ್ತು ಸುತ್ತಮುತ್ತ ಜನರು ಜಮಾಯಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಬ್ಬದ ಹಿನ್ನೆಲೆ ಹೂ, ಹಣ್ಣು ಮತ್ತು ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ, ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಈ ಬಾರಿ ಹೂ, ಹಣ್ಣುಗಳ ಬೆಲೆ ಶೇ. 40 ರಿಂದ 50 ರಷ್ಟು ಹೆಚ್ಚಳವಾಗಿದೆ. ಸೇವಂತಿಗೆ ಪ್ರತಿ ಕೆಜಿಗೆ 400 ರೂ. ಇದ್ದು, ಗುಲಾಬಿ ಹೂ ಕೆಜಿ 410 ರೂ. ತಲುಪಿದೆ.