ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದ ಅಂದಿನ ಸರ್ಕಾರ ಕಾನೂನುಬದ್ಧ ಕ್ರಮ ಅನುಸರಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು. ಇಂದು ನಿರ್ಭಯ ಯೋಜನೆಯಡಿ ನಿರ್ಮಾಣವಾದ ಬೆಂಗಳೂರು ಪೊಲೀಸ್ ಇಂಟಿಗ್ರೇಟೆಡ್ ಕಮ್ಯಾಂಡ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಕ್ರಮ ಸಂಪೂರ್ಣವಾಗಿ ಕಾನೂನುಬಾಹಿರ ಎಂದರು.
''ಸರ್ಕಾರಿ ಸೇವೆಯಲ್ಲಿರುವವರ ವಿರುದ್ಧದ ತನಿಖೆಗೆ ಕಾನೂನಾತ್ಮಕ ಮಾನದಂಡಗಳಿವೆ. ಅದರನ್ವಯ ಅಂದು ಶಾಸಕರಾಗಿದ್ದ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡುವ ಮುನ್ನ ಸ್ಪೀಕರ್ ಅನುಮತಿ ಪಡೆಯಬೇಕಿತ್ತು. ಆದರೆ ಸರ್ಕಾರ ಸ್ಪೀಕರ್ ಅನುಮತಿ ಪಡೆದಿಲ್ಲ. ಅಡ್ವೊಕೇಟ್ ಜನರಲ್ರಿಂದ ಕಾನೂನು ಸಲಹೆ ಪಡೆದಿದೆಯಾದರೂ, 25 ಸೆಪ್ಟೆಂಬರ್ 2019ರಂದು ಆ ಸಲಹೆ ದೊರೆತಿದೆ. ಆದರೆ, ಅದಕ್ಕೂ ಮುನ್ನವೇ ಅಂದಿನ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಮೌಖಿಕವಾಗಿ ಆದೇಶಿಸಿದ್ದರು. ಆ ಮೌಖಿಕ ಆದೇಶದ ಅನುಸಾರ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಿಬಿಐ ತನಿಖೆಗೆ ಸಮ್ಮತಿ ನೀಡಿರುವುದು ಕಾನೂನುಬಾಹಿರ'' ಎಂದು ಹೇಳಿದರು.