ಹಿಂದಿನ ಬಿಜೆಪಿ ಸರ್ಕಾರದ ನಡೆ ಕಾನೂನು ಬಾಹಿರ. ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸಿಬಿಐಗೆ ನೀಡಿದ್ದು ಕಾನೂನುಬಾಹಿರ. ರಾಜಕೀಯ ದುರುದ್ದೇಶ ಇಟ್ಟುಕೊಂಡು ಈ ಮೂಲಕ ನಮ್ಮ ನಾಯಕರಾದ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಬಿಜೆಪಿ ಸಂಚು ಮಾಡಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವಿರೋಧ ಪಕ್ಷವನ್ನು ಮುಗಿಸಬೇಕು ಎಂದು ಸಂಚು ರೂಪಿಸುತ್ತಿದ್ದಾರೆ. ವಿಪಕ್ಷದವರನ್ನು ಕಟ್ಟಿ ಹಾಕಬೇಕು ಎಂದು ಬಿಜೆಪಿ ಮಾಡುತ್ತಿದೆ. ಧ್ವನಿ ಕಟ್ಟಿಹಾಕಲು ಕೆಲವರನ್ನು ಐಟಿ ಇಡಿ ಮೂಲಕ ಹೆದರಿಸುತ್ತಾರೆ. ಥ್ರೆಟ್ ಆಗುವಂತವರನ್ನು ರಾಜಕೀಯವಾಗಿ ಮುಗಿಸುವುದಕ್ಕೆ ಯತ್ನ ಮಾಡುತ್ತಾರೆ ಎಂದು ಆರೋಪಿಸಿದರು.
ಎಐಸಿಸಿ ಅಧ್ಯಕ್ಷರಿಂದ ಹಿಡಿದು ಪಿಸಿಸಿ ಅಧ್ಯಕ್ಷರ ತನಕವೂ ನಾಯಕರ ವಿರುದ್ದ ಸಂಚು ರೂಪಿಸುತ್ತಾರೆ. ಅನವಶ್ಯಕವಾಗಿ ಡಿಕೆಶಿ ಮತ್ತು ಸಿಎಂ ವಿರುದ್ದ ಆರೋಪ ಮಾಡುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಇದನ್ನು ಪ್ರಾಮಾಣಿಕವಾಗಿ ಸಂಚು ರೂಪಿಸುವ ಕೆಲಸ ಮಾಡಿದ್ದರು. ಮರ್ಡರ್ ಮಾಡಿದ್ದರೂ ಪರವಾಗಿಲ್ಲ ಅಂತವರ ಮೇಲೆ ಏನೂ ಆಗಿಲ್ಲ. ಆದರೆ ನಮ್ಮನ್ನು ಮಾತ್ರ ಹೆದರಿಸುತ್ತಾರೆ ಎಂದು ಸಚಿವರು ಕಿಡಿ ಕಾರಿದರು.
ಐಟಿ, ಇಡಿ, ಆಪರೇಷನ್ ಕಮಲ ಸೇರಿದಂತೆ ವಿವಿಧ ತಂತ್ರಗಳನ್ನು ಮಾಡುತ್ತ ಬಂದಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಬಂದ ತಕ್ಷಣ ವಿಪಕ್ಷಗಳ ನಾಯಕರ ನಿವಾಸ, ಕಚೇರಿಗಳ ಮೇಲೆ ದಾಳಿ ಆಗುತ್ತವೆ ಎಂದು ಆರೋಪಿಸಿದರು. ಬಿಜೆಪಿ ಅವರು ಕೊಲೆ ಮಾಡಿದ್ದರು, ದರೋಡೆ ಮಾಡಿದ್ದರು ಏನು ಆಗಲ್ಲ. ಸರ್ಕಾರದ ನಿನ್ನೆಯ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಬಿಜೆಪಿಯವರು ಬಹಳಷ್ಟು ಮಿಸ್ ಇನ್ಫಾರ್ಮೇಶನ್ ಕೊಡುತ್ತಿದ್ದಾರೆ. ಮಾಧ್ಯಮಗಳಲ್ಲೂ ಸಾಕಷ್ಟು ಪ್ರಶ್ನೆ ಎದ್ದಿದೆ ಎಂದರು.
9-9-2019ರಂದು ಇಡಿಯಿಂದ ಸರ್ಕಾರಕ್ಕೆ ಪಿಎಂಎನ್ಎಲ್ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಲು ಪತ್ರ ಬರುತ್ತದೆ. ಯಾವುದೇ ತನಿಖೆ ಆದಾಗ ಜನಪ್ರತಿನಿಧಿ ವಿರುದ್ದ ಸ್ಟಾಟುಚರಿ ಕಂಪ್ಲೆಂಟ್ ಹೋಗುತ್ತದೆ. ಕೇಸ್ ಬಂದಿರುವುದನ್ನು ತನಿಖೆ ಮಾಡಿತ್ತಿದ್ದೇವೆ, ಸಿಬಿಐಗೂ ಕೂಡ ಮಾಹಿತಿ ನೀಡಿದ್ದೇವೆ ಎಂದು ಸರ್ಕಾರಕ್ಕೆ ಬಂದ ಪತ್ರದಲ್ಲಿ ಉಲ್ಲೇಖ ಮಾಡುತ್ತಾರೆ. ಇದು ಕೇವಲ ಮಾಹಿತಿಗೆ ಮಾತ್ರ ಅಂತ ಇಡಿ ಕೊಟ್ಟಿದ್ದಾರೆ. ಎರಡೇ ದಿನಗಳಲ್ಲಿ ಮುಂದಿನ ಕ್ರಮಕ್ಕೆ ಡಿಪಿಆರ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಾನೆ ಮಾಡುತ್ತಾರೆ. ಡಿಪಿಆರ್ಗೆ ಸಂಬಂಧ ಇಲ್ಲದಿದ್ದರೂ ಕಳುಹಿಸುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ರಾಜ್ಯ ಸರ್ಕಾರದಿಂದ ದರೋಡೆಕೋರರ ರಕ್ಷಣೆ: ಹೆಚ್.ಡಿ.ಕುಮಾರಸ್ವಾಮಿ