ಬೆಂಗಳೂರು:ಕೊಟ್ಟ ಸಾಲವನ್ನು ಹಿಂದಿರುಗಿಸುವಂತೆ ಒತ್ತಾಯಪಡಿಸುವುದು ಅಥವಾ ಬಲವಂತಪಡಿಸುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸಾಲ ಹಿಂದಿರುಗಿಸುವಂತೆ ಕೋರಿ ಒತ್ತಡ ಹೇರಿದ ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಏಳು ವರ್ಷ ಶಿಕ್ಷೆಗೆ ಗುರಿಯಾಗಿದ್ದ ಮಂಗಳ ಗೌರಿ ತನಗೆ ವಿಧಿಸಿದ್ದ ಶಿಕ್ಷೆ ರದ್ದು ಪಡಿಸುವಂತೆ ಕೋರಿ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಪ್ರಕರಣದಲ್ಲಿ ಮೃತ ಪಟ್ಟಿರುವ ರಾಜುಗೆ ಆತ್ಮಹತ್ಯೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದಲೇ ಅರ್ಜಿದಾರರಾದ ಮಂಗಳ ಗೌರಿ ಪ್ರಚೋದನೆ ನೀಡಿದರೆಂಬುದನ್ನು ಸಾಬೀತುಪಡಿಸಲು ಯಾವುದೇ ಅಂಶಗಳಿಲ್ಲ. ಜೊತೆಗೆ ಯಾವುದೇ ಆಯಾಮದಿಂದ ನೋಡಿದರೂ ಸಹ ಆರೋಪಿ ಸಾಲಮರುಪಾವತಿ ಮಾಡದಿದ್ದರೆ ಜೀವ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿರುವುದು ಪ್ರಚೋದನೆ ನೀಡಿದಂತಾಗದು ಎಂದು ನ್ಯಾಯಪೀಠ ತಿಳಿಸಿದೆ.
ಜೊತೆಗೆ, ಅರ್ಜಿದಾರರಿಂದ ರಾಜು ಸಾಲ ಪಡೆದಿದ್ದರು. ಅವರು ಮರುಪಾವತಿ ಮಡುವಂತೆ ಕೇಳಿದ್ದರು. ಆದರೆ, ಅದೇ ಉದ್ದೇಶದಿಂದ ಕಿರುಕುಳ ನೀಡಿದ್ದಾರೆ ಎಂಬುದಕ್ಕೆ ಸಾಕ್ಷಿ ಇಲ್ಲ. ಅರ್ಜಿದಾರರಿಗೆ ಮರು ಪಾವತಿ ಬೇಕಿತ್ತೇ ವಿನಾ ಅದಕ್ಕಾಗಿ ರಾಜು ಪ್ರಾಣ ಬೇಕಾಗಿರಲಿಲ್ಲ. ಹಾಗಾಗಿ ಅವರು ಉದ್ದೇಶಪೂರ್ವಕವಾಗಿಯೇ ಪ್ರಚೋದನೆ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಅಂಶಗಳಿಲ್ಲದ ಕಾರಣ ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶಿಸಿದೆ.