ಕರ್ನಾಟಕ

karnataka

ETV Bharat / state

ಒತ್ತುವರಿ ತೆರವು ನಿಲ್ಲಿಸಲು ಪ್ರಭಾವಿಗಳ ಒತ್ತಡ: ತಡೆಯಾಜ್ಞೆ ಬಾರದಂತೆ ಸರ್ಕಾರದ ಜಾಣ ನಡೆ - etv Bharat Kannada

ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ತೆರವು ಕಾರ್ಯಕ್ಕೆ ಯಾವುದೇ ತಡೆಯಾಜ್ಞೆ ಬಾರದ ನಿಟ್ಟಿನಲ್ಲಿ ಕೋರ್ಟ್‌ನಲ್ಲಿ ಕೇವಿಯಟ್ ಹಾಕಲು ಸರ್ಕಾರ ಸೂಚಿಸಿದೆ.

ತೆರವು ಕಾರ್ಯಾಚರಣೆ
ತೆರವು ಕಾರ್ಯಾಚರಣೆ

By

Published : Sep 15, 2022, 11:08 AM IST

ಬೆಂಗಳೂರು:ಮಳೆ ಅನಾಹುತಕ್ಕೊಳಗಾದ ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಪ್ರತಿಷ್ಠಿತರ ಒತ್ತುವರಿ ಮೇಲೂ ಜೆಸಿಬಿಗಳು ಘರ್ಜಿಸುತ್ತಿವೆ. ಇತ್ತ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರ ಮೇಲೆ ಸಾಕಷ್ಟು ಒತ್ತಡ ಬರುತ್ತಿದೆ. ಈ ಮಧ್ಯೆ ತೆರವು ಕಾರ್ಯಕ್ಕೆ ಯಾವುದೇ ತಡೆಯಾಜ್ಞೆ ಬಾರದ ನಿಟ್ಟಿನಲ್ಲಿ ಕೋರ್ಟ್‌ನಲ್ಲಿ ಕೇವಿಯಟ್ ಹಾಕಲು ಸರ್ಕಾರ ಸೂಚಿಸಿದೆ.

ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ತೆರವು: ಮಳೆಯ ಅವಾಂತರಕ್ಕೆ ಬೆಂಗಳೂರು ಸಂಪೂರ್ಣ ಮಂಡಿಯೂರಿತ್ತು. ಅದರಲ್ಲೂ ಬೊಮ್ಮನಹಳ್ಳಿ, ಮಹದೇವಪುರ ವಲಯದಲ್ಲಿ ಮಳೆಯ ಅನಾಹುತ ತೀವ್ರವಾಗಿತ್ತು. ಇದೀಗ ಸಿಎಂ ಸೂಚನೆ ಮೇರೆಗೆ ಬಿಬಿಎಂಪಿ ದೊಡ್ಡ ಪ್ರಮಾಣದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಪ್ರತಿಷ್ಠಿತ ಟೆಕ್ ಪಾರ್ಕ್, ಶಿಕ್ಷಣ ಸಂಸ್ಥೆಗಳು, ಬಿಲ್ಡರ್​ಗಳ ಅಂಗಳಕ್ಕೆ ಹೋಗಿ ಜೆಸಿಬಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಇದೀಗ ಒತ್ತುವರಿ ಮಾಡದಂತೆ ಪ್ರಭಾವಿಗಳೇ ಬಿಬಿಎಂಪಿ ಮುಖ್ಯ ಆಯುಕ್ತರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಒತ್ತುವರಿ ತೆರವುಗೊಳಿಸದಂತೆ ಪ್ರಭಾವಿಗಳ ಒತ್ತಡ:ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ತೆರವುಗೊಳಿಸುತ್ತಿದ್ದಂತೆ ಇತ್ತ ಪ್ರಭಾವಿಗಳು ಇದೀಗ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಹದೇವಪುರ ವಲಯದಲ್ಲಿನ ಟೆಕ್ ಪಾರ್ಕ್, ಐಟಿ ಕಂಪನಿಗಳು, ಬಿಲ್ಡರುಗಳು ಒತ್ತುವರಿ ತೆರವು ಕಾರ್ಯ ನಿಲ್ಲಿಸಲು ನಾನಾ ಕಸರತ್ತು ಆರಂಭಿಸಿದ್ದಾರೆ ಎನ್ನಲಾಗಿದೆ. ತಾವು ಮಾಡಿರುವ ಒತ್ತುವರಿ ತೆರವು ಮಾಡದಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಕರೆ ಮಾಡಿ ಒತ್ತಡ ಹೇರುತ್ತಿದ್ದಾರೆ. ಪ್ರಭಾವಿಗಳ ಮೂಲಕ ತೆರವು ಕಾರ್ಯಾಚರಣೆ ನಡೆಸದಂತೆ ಒತ್ತಡ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.

ಇತ್ತ ಕಂದಾಯ ಸಚಿವ ಆರ್.ಅಶೋಕ್ ಸರ್ವೆ ಮಾಡಲು ಬೇಕಾದ ಸರ್ವೇಯರುಗಳನ್ನು ಇಲಾಖೆಯಿಂದ ಕೊಡುವುದಾಗಿ ತಿಳಿಸಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯದೇ ಮುಲಾಜಿಲ್ಲದೆ ತೆರವು ಕಾರ್ಯ ನಡೆಸುವಂತೆ ಸಚಿವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​​ಗೆ ಸೂಚಿಸಿದ್ದಾರೆ.

ಕೇವಿಯಟ್ ಹಾಕಲು ನಿರ್ಧಾರ:ಈಗಾಗಲೇ ಹಲವು ಬಿಲ್ಡರುಗಳು ನ್ಯಾಯಾಲಯಗಳ ಮೊರೆ ಹೋಗಿ ತೆರವು ಕಾರ್ಯಾಚರಣೆಗೆ ತಡೆ ತರಲು ಮುಂದಾಗಿದ್ದಾರೆ. ಇದನ್ನರಿತ ಸರ್ಕಾರ ನ್ಯಾಯಾಲಯಗಳಲ್ಲಿ ಕೇವಿಯಟ್ ಹಾಕಲು ಎಜಿಗೆ ಸೂಚನೆ ನೀಡಿದೆ. ಕೇವಿಯಟ್ ಹಾಕುವ ನಿಟ್ಟಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಿಗೂ ಸರ್ಕಾರ ಸೂಚನೆ ನೀಡಿದೆ. ಈಗಾಗಲೇ ಕೆಲ ಬಿಲ್ಡರುಗಳು ನ್ಯಾಯಾಲಯದ ಮೊರೆ ಹೋಗಿವೆ. ಹೀಗಾಗಿ ತೆರವು ಕಾರ್ಯಾಚರಣೆಗೆ ಕಾನೂನು ಅಡ್ಡಿ ಬರದಂತೆ ನ್ಯಾಯಾಲಯಕ್ಕೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕೇವಿಯಟ್ ಹಾಕಲು ಸೂಚನೆ ನೀಡಿದೆ.

ಇದನ್ನೂ ಓದಿ: ಒತ್ತುವರಿ ತೆರವು ವೇಳೆ ನಲಪಾಡ್​ ವಾಗ್ವಾದ : ತೆರವು ತಡೆಯಲು ಯತ್ನ, ಬಗ್ಗದ ಪಾಲಿಕೆ ಅಧಿಕಾರಿಗಳು

ABOUT THE AUTHOR

...view details