ಬೆಂಗಳೂರು :ಸಚಿವ ಸ್ಥಾನಕ್ಕಾಗಿ ಸಿಎಂ ಬೊಮ್ಮಾಯಿಗೆ ದುಂಬಾಲು ಬಿದ್ದಿದ್ದ ಸಚಿವರು ಇದೀಗ ಸರ್ಕಾರಿ ವಸತಿ ಗೃಹ ಗಿಟ್ಟಿಸಿಕೊಳ್ಳಲು ಬೆನ್ನು ಬಿದ್ದಿದ್ದಾರೆ. ಇತ್ತ ಕೆಲ ಮಾಜಿ ಸಚಿವರು ಇನ್ನೂ ಮನೆ ಬಿಟ್ಟು ಕೊಡದ ಕಾರಣ ನೂತನ ಸಚಿವರಿಗೆ ಮನೆ ಹಂಚಿಕೆ ಮಾಡುವುದೇ ಸಿಎಂಗೆ ತಲೆನೋವಾಗಿ ಪರಿಣಮಿಸಿದೆ.
ಈವರೆಗೆ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ಸಿಎಂ ಬೊಮ್ಮಾಯಿ ಹಿಂದೆ ಗಿರಕಿ ಹೊಡೆಯುತ್ತಿದ್ದರು. ಸಚಿವ ಸ್ಥಾನ ಗಿಟ್ಟಿಸಿಕೊಂಡ ಸಚಿವರು ಇದೀಗ ಸರ್ಕಾರಿ ವಸತಿ ಗೃಹಕ್ಕಾಗಿ ಸಿಎಂಗೆ ದಂಬಾಲು ಬಿದ್ದಿದ್ದಾರೆ. ಸಚಿವರಿಗೆ ವಸತಿ ಗೃಹ ಹಂಚಿಕೆ ಮಾಡುವುದೇ ಈಗ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ.
ಕೆಲ ಸಚಿವರು ತಮಗೇ ಅದೇ ಸರ್ಕಾರಿ ವಸತಿ ಗೃಹ ಬೇಕೆಂದು ದುಂಬಾಲು ಬಿದ್ದಿರುವುದು ಸಿಎಂಗೆ ತಲೆನೋವಾಗಿ ಪರಿಣಮಿಸಿದೆ. ಇತ್ತ ಸಚಿವ ಸ್ಥಾನ ಗಿಟ್ಟಿಸಿಕೊಂಡ ಸಚಿವರುಗಳು ಸರ್ಕಾರಿ ವಸತಿಗೃಹವನ್ನ ದಕ್ಕಿಸಿಕೊಳ್ಳಲೂ ಕಸರತ್ತು ನಡೆಸುತ್ತಿದ್ದಾರೆ.
ಆ ಒಂದು ವಸತಿ ಗೃಹಕ್ಕೆ ಹಲವರ ಕಣ್ಣು :ಸಚಿವರಾಗಿದ್ದ ಸಿ ಪಿ ಯೋಗೇಶ್ವರ್ ಅವರಿಗೆ ಹಂಚಿಕೆಯಾಗಿರುವ ಕುಮಾರ ಕೃಪ ಪೂರ್ವದ ಗೃಹ ಸಂಖ್ಯೆ 3ರ ಮೇಲೆ ಹಲವು ಸಚಿವರು ಕಣ್ಣಿಟ್ಟಿದ್ದಾರೆ. ಆ ನಿವಾಸವನ್ನು ಸಚಿವರಾದ ಕೆ ಸಿ ನಾರಾಯಣಗೌಡ, ಬಿ. ಶ್ರೀರಾಮುಲು ಮತ್ತು ಆನಂದ್ ಸಿಂಗ್ ತಮಗೆ ಹಂಚಿಕೆ ಮಾಡುವಂತೆ ಕೋರಿದ್ದಾರೆ.
ಇತ್ತ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಅದೇ ಮನೆಯನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ. ಅದರ ಜೊತೆಗೆ ಗಣಿ ಹಾಗೂ ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಕೂಡ ಅದೇ ಮನೆಯನ್ನು ಹಂಚಿಕೆ ಮಾಡುವಂತೆ ಮುಖ್ಯಮಂತ್ರಿಗೆ ದುಂಬಾಲು ಬಿದ್ದಿದ್ದಾರೆ.
ಸಚಿವ ನಾರಾಯಣ ಗೌಡ ಮತ್ತು ಆನಂದ್ ಸಿಂಗ್ ಅವರಿಗೆ ಸರ್ಕಾರದಿಂದ ವಸತಿ ಗೃಹ ಹಂಚಿಕೆ ಆಗಿಲ್ಲ. ಬಿ. ಶ್ರೀರಾಮುಲು ಅವರು ಸಪ್ತ ಸಚಿವರ ನಿವಾಸದಲ್ಲಿರುವ ಸರ್ಕಾರಿ ವಸತಿಗೃಹ ನಂ. 6ರಲ್ಲಿದ್ದಾರೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಯೋಗೇಶ್ವರ್ ಸದ್ಯ ಆ ಮನೆಯನ್ನು ಬಿಟ್ಟು ಕೊಡಲು ಸಿದ್ಧರಿಲ್ಲ.
ಇನ್ನೂ ನಾಲ್ಕೈದು ತಿಂಗಳು ಅದೇ ಸರ್ಕಾರಿ ನಿವಾಸದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಇದನ್ನು ಪುರಸ್ಕರಿಸಿದ ಹಿನ್ನೆಲೆ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ಇನ್ನು, ಯೊಗೇಶ್ವರ್ ಅವರಿಗೆ ಮನೆ ಹಂಚಿಕೆ ಸಾಧ್ಯವಾಗದಿದ್ದರೆ ಕೈಗಾರಿಕಾ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಅವರಿದ್ದ ಕ್ರೆಸೆಂಟ್ ರಸ್ತೆಯ ಸರ್ಕಾರಿ ವಸತಿ ಗೃಹ ನಂ–3 ಅನ್ನು ಹಂಚಿಕೆ ಮಾಡುವಂತೆ ಶ್ರೀರಾಮುಲು ಮನವಿ ಸಲ್ಲಿಸಿದ್ದರು.