ಕರ್ನಾಟಕ

karnataka

ETV Bharat / state

ಶಿಕ್ಷಕರ ಹುದ್ದೆ ಭರ್ತಿ: ಪರಿಷತ್​ನಲ್ಲಿ ಸರ್ಕಾರದ ಮೇಲೆ ಪಕ್ಷಾತೀತ ಒತ್ತಡ - ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ

ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ ಮಾಡುವಂತೆ ಪರಿಷತ್​ನಲ್ಲಿ ಸರ್ವಪಕ್ಷ ಸದಸ್ಯರು ಸರ್ಕಾರದ ಮೇಲೆ ಒತ್ತಡ ಹೇರಿದರು.

Pressure from members of all parties in the council to fill the posts of teachers
ಸಭಾಪತಿ ಬಸವರಾಜ ಹೊರಟ್ಟಿ

By

Published : Feb 16, 2023, 10:54 PM IST

ಬೆಂಗಳೂರು:ರಾಜ್ಯದ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕದಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ಸರ್ವ ಪಕ್ಷದ ಸದಸ್ಯರು ವಿಧಾನ ಪರಿಷತ್​ನಲ್ಲಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ವಿಧಾನ ಪರಿಷತ್​ನಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಸ್ತಾಪಿಸಿದ ಈ ವಿಚಾರದ ಮೇಲೆ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಸದಸ್ಯರು ಮಾತನಾಡಿದರು. ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ಮೂಡಿಬಂತು. ಶಿಕ್ಷಣದ ಗುಣಮಟ್ಟ ಉಳಿಯಲು ಸರ್ಕಾರಿ ಶಾಲೆಗಳು ಅದರಲ್ಲೂ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡುವ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರ ಖಾಲಿ ಇರುವ ಶಿಕ್ಷಕರು ಹುದ್ದೆಯನ್ನು ಬರಿಸಬೇಕು ಎಂಬ ಒತ್ತಡ ಹೇರಲಾಯಿತು.

ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡರು ಮಾತನಾಡಿ, ಮಂಜೂರಾದ ಈ ಹುದ್ದೆಗಳು 2016ರಿಂದ ಖಾಲಿ ಉಳಿದು, ಕನ್ನಡ ಮಾಧ್ಯಮ ಶಾಲೆ-ಕಾಲೇಜುಗಳು ಮುಚ್ಚುವ ಸ್ಥಿತಿಯತ್ತ ತಲುಪಿವೆ ಎಂದು ಸರ್ಕಾರದ ಗಮನ ಸೆಳೆದರು. ಇದಕ್ಕೆ ಪರಿಷತ್ ಸರ್ವಪಕ್ಷ ಸದಸ್ಯರು ದನಿಗೂಡಿಸಿದರು. ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಮಾಡಿದರು. ಸದಸ್ಯರ ಈ ಮನವಿ ಬೆಂಬಲಿಸಿದ ಬಸವರಾಜ ಹೊರಟ್ಟಿ ಸಹ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತ್ವರಿತ ಪರಿಹಾರ ಮಾರ್ಗ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೊದಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಾವು ಈ ಸಂಬಂಧ ಇನ್ನೊಮ್ಮೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಆದಷ್ಟು ಬೇಗ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಹಣಕಾಸು ಇಲಾಖೆ ಇವರ ವ್ಯಾಪ್ತಿಯಲ್ಲಿ ಬರುವ ಹಿನ್ನೆಲೆಯಲ್ಲಿ ಅವರೇ ಮನಸ್ಸು ಮಾಡಿದರೆ ಆದಷ್ಟು ಬೇಗ ಇದಕ್ಕೊಂದು ಪರಿಹಾರ ಸಿಗುತ್ತದೆ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಸಚಿವರು ಈ ವಿಚಾರವಾಗಿ ಮೀನಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಪತಿ ಹೊರಟ್ಟಿ, ಫೆ. 23ರ ಮಧ್ಯಾಹ್ನ ತಮ್ಮ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳ ಜಂಟಿ ಸಭೆಗೆ ಏರ್ಪಾಟು ಮಾಡುವಂತೆ ಸೂಚಿಸಿದಾಗ ಶಾಲಾ ಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ್ ಸಹಮತ ವ್ಯಕ್ತಪಡಿಸಿದರು.

ಆರ್ಥಿಕ ಇಲಾಖೆ ಸಲಹೆ: ಇದಕ್ಕೂ ಮೊದಲು ಈ ವಿಷಯದತ್ತ ಗಮನಸೆಳೆದಾಗ ಬಿ.ಸಿ.ನಾಗೇಶ್ ಉತ್ತರಿಸಿ, ಖಾಸಗಿ ಅನುದಾನಿತ ಪ್ರೌಢಶಾಲೆ ಹಾಗೂ ಪದವಿ ಕಾಲೇಜುಗಳಲ್ಲಿ 31-12-2015ರ ಪೂರ್ವದಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ. ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ 1-1-2016ರ ನಂತರ ಖಾಲಿಯಾಗಿರುವ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಸಹಮತಿ ಕೋರಿದಾಗ, 2015ರ ಪೂರ್ವದ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲು ತಿಳಿಸಿದೆ. ಹೀಗಾಗಿ 2015ರ ಪೂರ್ವ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಿದ ಬಳಿಕ 1-1-16ರ ನಂತರ ಖಾಲಿಯಾಗಿರುವ ಹುದ್ದೆಗಳ ಭರ್ತಿಗೆ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಚಿವರ ಈ ಉತ್ತರಕ್ಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ, ಏಳು ವರ್ಷಗಳಿಂದ 4,314ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿವೆ. ಮಂಜೂರಾದ ಹುದ್ದೆಗಳಾದ ಕಾರಣ ಸರ್ಕಾರದ ಬೊಕ್ಕಸದಲ್ಲಿ ಹಣ ಜಮೆಯಾಗಿರುತ್ತದೆ. ಹುದ್ದೆಗಳ ಭರ್ತಿಯಿಂದ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ. ಕನ್ನಡ ಮಾಧ್ಯಮದ ಈ ಶಾಲೆ- ಕಾಲೇಜುಗಳಲ್ಲಿ ಶೇ.90ರಷ್ಟು ಹಳ್ಳಿಗಳಿವೆ. ಇಂದಲ್ಲ, ನಾಳೆ ಅನುದಾನಕ್ಕೆ ಒಳಪಡುತ್ತೇವೆ ಎಂದು ಮೂರ‌್ನಾಲ್ಕು ಸಾವಿರ ರೂ.ಗೆ ದುಡಿಯುತ್ತಿರುವವರ ವಯೋಮಿತಿ ಮೀರಲಾರಂಭಿಸಿದೆ. ಕನ್ನಡ ಮಾಧ್ಯಮ, ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಫಲಿತಾಂಶ ಸುಧಾರಣೆಗೆ ಒತ್ತು ನೀಡಿ, ಇನ್ನೊಂದೆಡೆ ನಿರ್ಲಕ್ಷಿಸುತ್ತಿರುವುದು ಸರ್ಕಾರದ ದ್ವಂದ್ವ ನಿಲುವಾಗುತ್ತದೆ ಎಂದು ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದರೆ, ಎಸ್.ಎಲ್.ಭೋಜೇಗೌಡ ಧ್ವನಿಗೂಡಿಸಿದರು. ಖಾಸಗಿ ಅನುದಾನಿತ ಶಾಲೆಗಳಲ್ಲಿ ಒಂದಿಬ್ಬರು ಕಾಯಂ ಶಿಕ್ಷಕರಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ಉತ್ತರ ಸರಿಯಿಲ್ಲವೆಂದು ಆಡಳಿತ ಪಕ್ಷದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಆಡಳಿತ ಪಕ್ಷದ ಸದಸ್ಯರಾದ ಎಸ್.ವಿ.ಸಂಕನೂರು, ಶಶೀಲ್ ನಮೋಶಿ ಬೇಸರ ವ್ಯಕ್ತಪಡಿಸಿದರು. ಸಭಾಪತಿ ಮಧ್ಯೆ ಪ್ರವೇಶಿಸಿ ನೀಡಿದ ಸೂಚನೆಗೆ ಬಿ.ಸಿ.ನಾಗೇಶ್ ಸಮ್ಮತಿಸಿದ್ದರಿಂದ ಈ ವಿಷಯದ ಚರ್ಚೆಗೆ ತೆರೆಬಿತ್ತು.

ಇದನ್ನೂ ಓದಿ:ವಿಎಸ್​ಎಲ್ ಮುಚ್ಚಲು ಅವಕಾಶ ಕೊಡುವುದಿಲ್ಲ: ಸಿಎಂ ಬೊಮ್ಮಾಯಿ ಭರವಸೆ

ABOUT THE AUTHOR

...view details