ಕರ್ನಾಟಕ

karnataka

ETV Bharat / state

ಆಮ್ ಆದ್ಮಿ ಪಕ್ಷಕ್ಕೆ 11 ವರ್ಷ; ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮ - ನಗರ ಅಧ್ಯಕ್ಷ ಡಾ. ಸತೀಶ್ - Achievements of AAP party

ಆಮ್ ಆದ್ಮಿ ಪಕ್ಷ 11 ವರ್ಷಗಳನ್ನು ಪೂರೈಸಿದ್ದು, ಅದರ ಅಂಗವಾಗಿ ಬೆಂಗಳೂರಿನಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಆಪ್​ ಮುಖಂಡರು ತಿಳಿಸಿದ್ದಾರೆ.

Press meet about 11 years of aap
Press meet about 11 years of aap

By ETV Bharat Karnataka Team

Published : Nov 23, 2023, 5:49 PM IST

ಆಮ್ ಆದ್ಮಿ ಪಕ್ಷಕ್ಕೆ 11 ವರ್ಷ; ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮ - ನಗರ ಅಧ್ಯಕ್ಷ ಡಾ. ಸತೀಶ್

ಬೆಂಗಳೂರು: ಭ್ರಷ್ಟಾಚಾರದ ವಿರುದ್ಧವಾಗಿ ಹುಟ್ಟಿದ್ದು ಆಮ್ ಆದ್ಮಿ ಪಕ್ಷ. ಇಡೀ ದೇಶದಲ್ಲಿ ಭ್ರಷ್ಟಾಚಾರ ಮುಕ್ತ ರಾಜಕಾರಣ ಬರಬೇಕು. ಜಾತಿ, ಹಣದ ಮೇಲೆ ನಡೆಯುವ ರಾಜಕೀಯವನ್ನು ಕೊನೆಗೊಳಿಸಿ, ಸಂಪೂರ್ಣವಾಗಿ ಜನಸಾಮಾನ್ಯರ, ಅಭಿವೃದ್ಧಿ ಕೇಂದ್ರಿತ ರಾಜಕಾರಣ ಮಾಡಲು ಅರವಿಂದ್ ಕೇಜ್ರಿವಾಲ್ ಮತ್ತು ಹಲವು ಮುಖಂಡರು ಆಮ್ ಆದ್ಮಿ ಪಕ್ಷವನ್ನು ಸ್ಥಾಪನೆ ಮಾಡಿದ್ದರು ಎಂದು ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಹೇಳಿದರು.

ಆಮ್ ಆದ್ಮಿ ಪಕ್ಷ ಸ್ಥಾಪನೆಯಾಗಿ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷ ದೇಶಾದ್ಯಂತ ಮನೆ ಮಾತಾಗಿದ್ದು, ಕೋಟ್ಯಂತರ ನಿಷ್ಠಾವಂತ ಕಾರ್ಯಕರ್ತರನ್ನು ಹೊಂದಿದೆ. ದೆಹಲಿಯಲ್ಲಿ ಸತತವಾಗಿ ಮೂರನೇ ಬಾರಿ ಸರ್ಕಾರ ರಚನೆ ಮಾಡಿದ್ದೇವೆ. ಪಂಜಾಬ್‌ನಲ್ಲಿ ಸಹ ಬಹುಮತ ಪಡೆದು ಅಧಿಕಾರ ಪಡೆದಿದ್ದೇವೆ. ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಕೂಡ ಅಧಿಕಾರ ಹಿಡಿದಿದ್ದೇವೆ. ಸೂರತ್‌ ಮತ್ತು ಚಂಡೀಗಢದ ಪಾಲಿಕೆಯಲ್ಲಿ ಸ್ಥಾನ ಗಳಿಸಿದ್ದೇವೆ. ಗುಜರಾತ್‌, ಗೋವಾದಲ್ಲಿ ಸಹ ಆಮ್ ಆದ್ಮಿ ಪಕ್ಷ ಛಾಪು ಮೂಡಿಸಿದೆ ಎಂದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಆಮ್ ಆದ್ಮಿ ಪಕ್ಷದ ಚಿಂತನೆ ಬೆಳೆಯುತ್ತಿದೆ. ದೇಶದಲ್ಲಿ ಬದಲಾವಣೆ ಬಯಸುವವರಿಗೆ ಪಕ್ಷದ ಚಿಂತನೆಗಳು ಇಷ್ಟವಾಗಿವೆ. ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಮಾಡಿದ ಸುಧಾರಣೆಗಳು ಇಂದು ದೇಶವನ್ನು ಆಳಿದ ಪಕ್ಷಗಳಿಗೆ ಮಾದರಿಯಾಗಿದ್ದು, ಅದನ್ನು ನಕಲು ಮಾಡುತ್ತಿವೆ. ನಕಲು ಮಾಡಿದರೂ, ಅವುಗಳನ್ನು ವ್ಯವಸ್ಥಿತ ರೀತಿಯಲ್ಲಿ ಜಾರಿಗೆ ತರುವಲ್ಲಿ ಅವು ಎಡವಿವೆ ಎಂದು ಆರೋಪಿಸಿದರು.

ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಕಲು ಮಾಡಿದ್ದರೂ ಯಾವುದೇ ಬದಲಾವಣೆ ತಂದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದ್ದು ಕೂಡ ದೆಹಲಿ ಮಾದರಿಯನ್ನು ನೋಡಿ. ಅರವಿಂದ್ ಕೇಜ್ರಿವಾಲ್ ಅವರು ಉಚಿತ ಯೋಜನೆಗಳ್ನು ಬಜೆಟ್‌ನಲ್ಲಿ ಹಣಕಾಸಿನ ವ್ಯತ್ಯಯ ಆಗದಂತೆ ನೋಡಿಕೊಂಡು ನೀಡಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಕೂಡ ಇಂದು ಆಮ್ ಆದ್ಮಿ ಪಕ್ಷದ ಬೆಳವಣಿಗೆಯಿಂದ ಆತಂಕಗೊಂಡಿದೆ. ನಮ್ಮ ನಾಯಕರಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಅವರಂತಹ ನಾಯಕರು ಬಿಜೆಪಿಯ ನಿದ್ದೆಗೆಡಿಸಿದ್ದಾರೆ. ಅಂತಹ ಮುಖಂಡರನ್ನು ಜೈಲಿಗೆ ಹಾಕಿ, ಆಮ್ ಆದ್ಮಿ ಪಕ್ಷವನ್ನು ಕಟ್ಟಿಹಾಕಲು ಬಿಜೆಪಿ ಷಡ್ಯಂತ್ರ ಮಾಡುತ್ತಿದೆ ಎಂದು ದೂರಿದರು.

ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮ:ಬಿಜೆಪಿ ನೀಡುವ ಆಮಿಷಕ್ಕೆ ಆಮ್ ಆದ್ಮಿ ಪಕ್ಷದ ನಾಯಕರು ಒಪ್ಪದ ಕಾರಣ ಈ ರೀತಿ ಷಡ್ಯಂತ್ರ ಮಾಡುತ್ತಿದೆ. ಇದೆಲ್ಲದರ ನಡುವೆ ಆಮ್ ಆದ್ಮಿ ಪಕ್ಷ 11 ವರ್ಷಗಳನ್ನು ಪೂರೈಸಿದ್ದು, ಅದರ ಅಂಗವಾಗಿ ಬೆಂಗಳೂರಿನಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಅದರ ಜೊತೆಗೆ ಕನ್ನಡ ರಾಜ್ಯೋತ್ಸವ ಮತ್ತು ಸಂವಿಧಾನ ದಿನಾಚರಣೆಯನ್ನು ಒಟ್ಟಿಗೆ ಆಚರಣೆ ಮಾಡಲಾಗುವುದು. ಜಯನಗರದ ಎಂಇಎಸ್ ಕ್ರೀಡಾಂಗಣದಲ್ಲಿ ನವೆಂಬರ್ 26ರಂದು ಸಂಜೆ 4 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷ ಕರ್ನಾಟಕ ಉಸ್ತುವಾರಿ, ರಾಷ್ಟ್ರೀಯ ನಾಯಕ ದಿಲೀಪ್ ಪಾಂಡೆ, ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂ ಎಲ್ಲಾ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಾಧ್ಯಮಗೋಷ್ಟಿಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ಪಾಲ್ಗೊಂಡಿದ್ದರು.

ಇದನ್ನೂ ಓದಿ:ನಾನು ಭಾರತದ ಜನತೆಗಾಗಿ ಕೆಲಸ ಮಾಡುತ್ತಿದ್ದೇನೆ, ಭಾರತೀಯ ಜನತಾ ಪಕ್ಷಕ್ಕಾಗಿ ಅಲ್ಲ: ಪಶ್ಚಿಮ ಬಂಗಾಳ ರಾಜ್ಯಪಾಲ

ABOUT THE AUTHOR

...view details