ಬೆಂಗಳೂರು: ಬಿಬಿಎಂಪಿ ಹನ್ನೆರಡು ಸ್ಥಾಯಿ ಸಮಿತಿಗಳಲ್ಲಿ ಹತ್ತು ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಇನ್ನೆರಡು ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಗೊಂದಲ ಇರೋದರಿಂದ ಮತ್ತೆ ಮುಂದೂಡಲಾಗಿದೆ.
ನಗರದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯನ್ನು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ, ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ತೋಟಗಾರಿಕೆ ಸ್ಥಾಯಿ ಸಮಿತಿಯಲ್ಲಿ ಹನ್ನೊಂದು ಜನ ಸದಸ್ಯರಿದ್ದರೂ,ಅಧ್ಯಕ್ಷರಾಗಿ ಯಾರನ್ನು ಮಾಡಬೇಕು ಎಂಬ ಗೊಂದಲದಿಂದ ಮುಂದೂಡಲಾಗಿದೆ. ವಿಜಯನಗರದ ಕಾರ್ಪೋರೇಟರ್ ಮಹಾಲಕ್ಷ್ಮಿ ಹಾಗೂ ಉಮಾದೇವಿ ಮಧ್ಯೆ ಪೈಪೋಟಿ ಇರುವುದರಿಂದ ಇಂದು ಆಯ್ಕೆಯಾಗಲಿಲ್ಲ. ಇನ್ನು ಲೆಕ್ಕಪತ್ರ ಸ್ಥಾಯಿ ಸಮಿತಿಯಲ್ಲಿ ಹತ್ತು ಮಂದಿ ಮಾತ್ರ ಸದಸ್ಯರು ಇರೋದರಿಂದ, ಸದಸ್ಯರ ಆಯ್ಕೆ ಬಳಿಕ ಅಧ್ಯಕ್ಷರ ಆಯ್ಕೆ ಆಗಲಿದೆ. ಮುಂದಿನ ವಾರ ಈ ಎರಡು ಸ್ಥಾಯಿ ಸಮಿತಿಗಳಿಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.