ಬೆಂಗಳೂರು: ಬಾನಂಗಳದಲ್ಲಿ ರುಜು ಹಾಕಿದ ಲೋಹದ ಹಕ್ಕಿಗಳು, ಹಾರ್ಟ್ ಬರೆದು ನೆರೆದವರ ಹಾರ್ಟ್ ಗೆದ್ದ ಸೂರ್ಯಕಿರಣಗಳು. ಮೋಡಿ ಮಾಡಿದ ಸೂರ್ಯ ಕಿರಣ್ ಹಾಗೂ ಸಾರಂಗ್ ಜುಗಲ್ ಬಂದಿ. ಇದೆಲ್ಲಾ ನಡೆದಿದ್ದು, 13ನೇ ಆವೃತ್ತಿಯ ಏರೋ ಇಂಡಿಯಾ ಶೋನಲ್ಲಿ. ಶುಕ್ರವಾರ ಈ ಶೋ ಕೊನೆಯಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಮಾರೋಪ ಮಾಡುವ ಮೂಲಕ ತೆರೆ ಎಳೆದರು.
ಸಮಾರೋಪ ಸಮಾರಂಭದಲ್ಲಿ ರಾಮನಾಥ್ ಕೋವಿಂದ್ ಅವರ ಪತ್ನಿ ಸವಿತಾ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೋವಿಡ್ ನಿಯಮಗಳ ಪಾಲನೆಯ ಜೊತೆಗೆ ಏರ್ ಶೋದ ಗೌರವವನ್ನು ಎತ್ತಿ ಹಿಡಿಯಲಾಗಿದೆ. 530 ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಿವೆ. ಹೈಬ್ರಿಡ್ ಫಾರ್ಮ್ಯಾಟ್ನಲ್ಲಿ ಆಗಿರುವ ಮೊದಲ ಕಾರ್ಯಕ್ರಮ ಇದು. 48 ಸಾವಿರ ಕೋಟಿ ರೂಪಾಯಿಯ ಆರ್ಡರ್ ಎಚ್ಎಎಲ್ಗೆ ದೊರೆತಿದೆ. ತಯಾರಕರಾಗಿ ಮತ್ತು ಸ್ವಾವಲಂಬನೆಯ ಪ್ರತೀಕವಾಗಿ ಏರ್ ಶೋ ನಡೆದಿದೆ. ಇದಕ್ಕೆ ನಾನು ಕರ್ನಾಟಕ ಮತ್ತು ಸಿಎಂಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.