ಬೆಂಗಳೂರು:ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರ್ನಾಟಕ ಸರ್ಕಾರದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು. ವಿಧಾನಸೌಧದ ಬ್ಯಾಂಕ್ವೆಂಟ್ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, 'ನಾಗರಿಕ ಸತ್ಕಾರ' ನೀಡಿ ರಾಷ್ಟ್ರಪತಿ ಅವರನ್ನು ಗೌರವಿಸಿ ಸನ್ಮಾನಿಸಿದರು.
ನಾಗರಿಕ ಸತ್ಕಾರ ಸ್ವೀಕರಿಸಿದ ದ್ರೌಪದಿ ಮುರ್ಮು ಅವರು, ತಾಯಿ ಭುವನೇಶ್ವರಿಗೆ ಹಾಗೂ ಸಮಸ್ತ ಕನ್ನಡಿಗರಿಗೆ ಹೃದಯಪೂರ್ವಕ ನಮಸ್ಕಾರಗಳು ಎಂದು ಕನ್ನಡದಲ್ಲಿ ತಿಳಿಸುತ್ತಲೇ ತಮ್ಮ ಭಾಷಣ ಆರಂಭಿಸಿದರು. ಕರ್ನಾಟಕದ ಪರಂಪರೆ, ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ,ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಕನ್ನಡಿಗರನ್ನು ಕೊಂಡಾಡಿದ ರಾಷ್ಟ್ರಪತಿ : ಕನ್ನಡಿಗರ ಪ್ರೀತಿ,ಹೃದಯ ವೈಶಾಲ್ಯತೆ ಮತ್ತು ತೋರಿದ ಅಭಿಮಾನ ಮತ್ತು ಸತ್ಕಾರ,ಕನ್ನಡಿಗರ ಮೃದು ಸ್ವಭಾವ, ಶಾಂತಿಪ್ರಿಯತೆ, ಉದಾರಮನೋಭಾವನೆಯನ್ನು ತಮ್ಮ ಭಾಷಣದಲ್ಲಿ ಪ್ರಶಂಸಿಸಿದರು. ಕರ್ನಾಟಕ ಹಾಗೂ ಬೆಂಗಳೂರು ನಗರದ ಮೇಲಿರುವ ತಮ್ಮ ಪ್ರೀತಿ, ಅಭಿಮಾನವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಇಡೀ ದೇಶದಲ್ಲಿಯೇ ಶಿಕ್ಷಣ ಮತ್ತು ಸಂಶೋಧನೆ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಪ್ರಮುಖ ಕೊಡುಗೆಯನ್ನು ನೀಡುತ್ತಿದೆ. ಇಂದು ನಾನು ದೇಶದ ಆರೋಗ್ಯ ಕ್ಷೇತ್ರ ಹಾಗೂ ರಕ್ಷಣಾ ಕ್ಷೇತ್ರದ ಅತ್ಯಂತ ಮೈಲಿಗಲ್ಲಾಗಿರುವ ಕ್ರಯೋಜಿನಿಕ್ ಎಂಜಿನ್ ಮತ್ತು ವೈರಾಲಜಿ ಸಂಶೋಧನಾ ದಕ್ಷಿಣ ವಲಯ ಕೇಂದ್ರವನ್ನು ಹಾಗೂ ಧಾರವಾಡದಲ್ಲಿ ಐಐಐಟಿ ನೂತನ ಕ್ಯಾಂಪಸ್ ಉದ್ಘಾಟಿಸಿರುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದರು.
ದೇಶಕ್ಕೆ ಕರ್ನಾಟಕದ ಕೊಡುಗೆ ಮಹತ್ತರವಾದುದು : ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಕೊಡುಗೆ ಅಪಾರ. ಜೈವಿಕ ತಂತ್ರಜ್ಞಾನ, ಸಂಶೋಧನೆ, ಅಭಿವೃದ್ಧಿ, ಬಾಹ್ಯಕಾಶ ಸಂಶೋಧನಾ ಕ್ಷೇತ್ರದಲ್ಲಿ ಕರ್ನಾಟಕ ಅಗ್ರಗಣ್ಯ ರಾಜ್ಯವಾಗಿದೆ. ಭಾರತದ ಅರ್ಥವ್ಯವಸ್ಥೆಯ ವಿಕಸನದಲ್ಲಿ ಕರ್ನಾಟಕ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಹೇಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ ಹಲವು ವರ್ಷಗಳಿಂದ ಎಫ್‍ಡಿಐ(ವಿದೇಶಿ ನೇರ ಹೂಡಿಕೆ)ನಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.
ಇಲ್ಲಿನ ದೂರದೃಷ್ಟಿ ರಾಜಕೀಯ ನಾಯಕರು, ಉದ್ಯಮಿಗಳು ನೂತನ ಆವಿಷ್ಕಾರಗಳು, ಸ್ಟಾರ್ಟ್‍ಅಪ್ ಸೇರಿದಂತೆ ಉದ್ಯಮ ವಲಯಕ್ಕೆ ಅತ್ಯಂತ ಸ್ನೇಹಮಯ ವಾತಾವರಣ ನಿರ್ಮಿಸುವ ಮೂಲಕ ಮಾದರಿಯಾಗುವಂತೆ ಮಾಡಿದ್ದಾರೆ. ಭಾರತ ದೇಶವು 5 ಬಿಲಿಯನ್ ಡಾಲರ್ ಅರ್ಥಿಕಾಭಿವೃದ್ಧಿ ಸಾಧಿಸುವಲ್ಲಿ ಕರ್ನಾಟಕ ಕೊಡುಗೆ ನೀಡಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.ಕರ್ನಾಟಕ ಪ್ರಮುಖ ಕೊಡುಗೆಗಳಿಂದ ದೇಶದ ಸ್ವಾತಂತ್ರ್ಯ ಶತಮಾನೋತ್ಸವ ಸಂದರ್ಭವಾದ 2047ರಲ್ಲಿ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಕರ್ನಾಟಕ ರಾಜ್ಯದ ಹಾಗೂ ವಿಧಾನಸಭಾ ಇತಿಹಾಸದಲ್ಲಿ ರಾಷ್ಟ್ರಪತಿಗಳ ನಾಗರಿಕ ಸತ್ಕಾರ ನಡೆದಿರುವುದಿಲ್ಲ ಎನ್ನುವುದು ನನ್ನ ಭಾವನೆ ಎಂದರು.