ಕರ್ನಾಟಕ

karnataka

ETV Bharat / state

ವಿಧಾನಸಭೆಯಲ್ಲಿ ಎಪಿಎಂಸಿ ತಿದ್ದುಪಡಿ ಸೇರಿದಂತೆ 6 ವಿಧೇಯಕಗಳ ಮಂಡನೆ - ವಿಧಾನಸಭೆ

2023ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ತಿದ್ದುಪಡಿ ಸೇರಿದಂತೆ 6 ವಿಧೇಯಕಗಳನ್ನು ವಿಧಾನಸಭೆಯಲ್ಲಿ ಬುಧವಾರ ಮಂಡನೆ ಮಾಡಲಾಯಿತು.

Presentation of six bills
ವಿಧಾನಸಭೆಯಲ್ಲಿ ಎಪಿಎಂಸಿ ತಿದ್ದುಪಡಿ ಸೇರಿದಂತೆ 6 ವಿಧೇಯಕಗಳ ಮಂಡನೆ

By

Published : Jul 5, 2023, 6:09 PM IST

ಬೆಂಗಳೂರು:2023ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ ಸೇರಿದಂತೆ 6 ವಿಧೇಯಕಗಳನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.

ಶಾಸನ ರಚನಾ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2023ನೇ ಸಾಲಿನ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ ಹಾಗೂ 2023ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. 2023ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕವನ್ನು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಮಂಡಿಸಿದರು.

ಕಾನೂನು ಸಚಿವ ಎಚ್.ಕೆ. ಪಾಟೀಲ್ ಪರವಾಗಿ ಸಚಿವ ಪ್ರಿಯಾಂಕ್​ ಖರ್ಗೆ ಮಾತನಾಡಿ, 2023ನೇ ಸಾಲಿನ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪರವಾಗಿ 2023ನೇ ಸಾಲಿನ ಕರ್ನಾಟಕ ಅಗ್ನಿಶಾಮಕ ತಿದ್ದುಪಡಿ ವಿಧೇಯಕ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರವಾಗಿ 2023ನೇ ಸಾಲಿನ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ಪ್ರಿಯಾಂಕ್ ಖರ್ಗೆ ಮಂಡಿಸಿದರು.

ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ:ವಿಧೇಯಕಗಳನ್ನು ಮಂಡಿಸುವುದಕ್ಕೂ ಮುನ್ನ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರ ನಡುವೆ ಪದೇ ಪದೇ ಮಾತಿನ ಚಕಮಕಿಯ ಪ್ರಸಂಗ ವಿಧಾನಸಭೆಯಲ್ಲಿ ಬುಧವಾರ ನಡೆಯಿತು. ಬಿಜೆಪಿ ಹಿರಿಯ ಸದಸ್ಯ, ಮಾಜಿ ಸಚಿವ ಆರ್.ಅಶೋಕ್ ಅವರು ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡುತ್ತಿದ್ದ ಸಂದರ್ಭದಲ್ಲಿ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ಹಾಗೂ ವಾಗ್ವಾದ ಉಂಟಾಯಿತು.

ನಿಮಗೆ ವಿರೋಧ ಪಕ್ಷದ ನಾಯಕನೇ ಇಲ್ಲ- ಜಾರ್ಜ್​:ಅಶೋಕ್ ಅವರು ವಿಷಯ ಪ್ರಸ್ತಾಪಿಸುತ್ತಿದ್ದಂತೆ ಇಂಧನ ಸಚಿವ ಕೆ. ಜೆ. ಜಾರ್ಜ್ ಅವರು, ವಿರೋಧ ಪಕ್ಷದ ನಾಯಕರು ಇದ್ದಿದ್ದರೆ ಮಾರ್ಗದರ್ಶನ ಮಾಡುತ್ತಿದ್ದರು. ನಿಮಗೆ ವಿರೋಧ ಪಕ್ಷದ ನಾಯಕನೇ ಇಲ್ಲ. ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿದರು.

ಆಗ ಅಶೋಕ್ ಅವರು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಕೊಳ್ಳುವುದು ನಮಗೆ ಸೇರಿದ್ದು, ನೀವು ಮುಖ್ಯಮಂತ್ರಿ ಆಯ್ಕೆ ಮಾಡಿಕೊಳ್ಳಲು ನಾಲ್ಕೈದು ದಿನ ತೆಗೆದುಕೊಂಡಿರಿ ಎಂದರು. ಆಗ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಜೆಪಿಯ ಸದಸ್ಯ ವಿ.ಸುನೀಲ್ಕುಮಾರ್ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಈಗ ಷರತ್ತು ಹಾಕಿ ಆದೇಶ ಹೊರಡಿಸಿದ್ದೀರಿ ಎಂದರು. ಆಗ ಮಧ್ಯಪ್ರವೇಶಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಅವರ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದೇನು? ಮಾಡುತ್ತಿರುವುದೇನು ಎಂದು ಪತ್ರಿಕೆಯೊಂದನ್ನು ಪ್ರದರ್ಶಿಸಿದರು.

ಕಾಂಗ್ರೆಸ್​ನ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ನೀವು ಅಂದಂಗೆ ಅನಿಸಿಕೊಳ್ಳಲು ಬಂದಿರೋದಾ, ಮುರುಕಲು ಬಸ್ಸು ಬಿಟ್ಟು ಹೋಗಿದ್ದೀರಿ ಎಂದಾಗ, ಬಿಜೆಪಿ ಸದಸ್ಯರು ನೀವು ಬಸ್ ಚೇಂಜ್ ಮಾಡಿದ್ದೀರಿ ಎಂದು ಛೇಡಿಸಿದರು. ನಾನೊಬ್ಬನೇ ಮಾಡಿಲ್ಲ. ಹಲವರು ಮಾಡಿದ್ದಾರೆ, ಬಸ್ ಚೇಂಜ್ ಮಾಡಿದ್ದರೂ ಗೆದ್ದು ಬಂದದಿದ್ದೇನೆ ಎಂದು ಶಿವಲಿಂಗೇಗೌಡ ಸಮರ್ಥಿಸಿಕೊಂಡರು.

ಕಾಂಗ್ರೆಸ್ ಸದಸ್ಯ ಕೋನರೆಡ್ಡಿ ಎದ್ದು ನಿಂತು, 15 ಲಕ್ಷ ರೂ. ಗ್ಯಾರಂಟಿ ಬರಲಿಲ್ಲ ಎಂದು ಬಿಜೆಪಿಯವರನ್ನು ಛೇಡಿಸಿದರು. ಇದಕ್ಕೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಕೂಡ ದನಿಗೂಡಿಸಿ 9 ವರ್ಷ ಕಳೆದರೂ 15 ಲಕ್ಷ ರೂ. ಜನರ ಖಾತೆಗೆ ಬರಲಿಲ್ಲ ಎಂದು ಕಾಲೆಳೆದರು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ನಿತ್ಯ 60 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಯಾರೂ ಕೂಡ ನಮಗೆ ಶಾಪ ಹಾಕುತ್ತಿಲ್ಲ ಎಂದರು. ಇದೇ ರೀತಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪದೇ ಪದೇ ವಾಗ್ವಾದ ನಡೆಯಿತು.

ಗ್ಯಾರಂಟಿ ಸಿಗುತ್ತದೋ, ಇಲ್ಲವೋ:ಮುಂದುವರೆದು ಮಾತನಾಡಿದ ಆರ್. ಅಶೋಕ್, ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಗೊಂದಲದ ಗ್ಯಾರಂಟಿಯಾಗಿವೆ. ಜನರಿಗೆ ಗ್ಯಾರಂಟಿ ಪ್ರಯೋಜನ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲ ಉಂಟಾಗಿದೆ. ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದನ್ನು ನಾವು ವಿರೋಧಿಸುತ್ತಿಲ್ಲ ಎಂದು ತಿಳಿಸಿದರು.

ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಯಾವುದೇ ಷರತ್ತುಗಳಿಲ್ಲದೆ 5 ಗ್ಯಾರಂಟಿಗಳನ್ನು ನೀಡಿದ್ದರು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಈಡೇರಿಸುವುದಾಗಿ ಹೇಳಿದ್ದರು. ಈಗ ಷರತ್ತು ಹಾಕುತ್ತಿದ್ದಾರೆ. 60 ದಿನವಾದರೂ ಗ್ಯಾರಂಟಿ ಅನುಷ್ಠಾನವಾಗಿಲ್ಲ. ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. 5 ಗ್ಯಾರಂಟಿಯನ್ನು ಜನರಿಗೆ ಕೊಟ್ಟ ಮೇಲೆ ಇಲ್ಲಿ ಕೂರಬೇಕು. ಅಲ್ಲಿಯವರೆಗೂ ಕೂರುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಆರ್. ಅಶೋಕ್ ಸರ್ಕಾರ ವಿರುದ್ಧ ವಾಗ್ದಾಳಿ:ಗ್ಯಾರಂಟಿ ಯೋಜನೆಗಳು ರಾಜ್ಯದ ಪಾಲಿಗೆ ದೌರ್ಭಾಗ್ಯವಾಗಿದೆ. 5 ಗ್ಯಾರಂಟಿ ಕೊಟ್ಟು ಮೋಸ ಮಾಡುತ್ತಿದೆ. ಎಲ್ಲ ಕಡೆ ಚೆಕ್​ ಪೋಸ್ಟ್​ ಹಾಕಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿದ್ದೇನು? ಅನುಷ್ಠಾನ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದರು. ಜನರಿಗೆ ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿ ಕೊಡುತ್ತೇವೆ ಎಂದು ಆಮಿಷವೊಡ್ಡಿ ಮರಳು ಮಾಡುವ ರೀತಿಯಲ್ಲಿ ಭರವಸೆ ನೀಡಿದರು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮನೆ ಬಾಗಿಲಿಗೆ ಗ್ಯಾರಂಟಿ ನೀಡುವುದಾಗಿ ಭರವಸೆ ನೀಡಿತ್ತು. ಈಗ ಸರ್ಕಾರಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಷರತ್ತು ಹಾಕಿದೆ. ಬಸ್ಸಿನ ಕಿಟಕಿ ಬಾಗಿಲುಗಳು ಕಿತ್ತು ಬರುತ್ತಿವೆ. ಹವಾನಿಯಂತ್ರಿತ ಬಸ್​ನಲ್ಲಿ ಅವಕಾಶವಿಲ್ಲ. ಆದರೆ, ಎಲ್ಲ ಬಸ್​ನಲ್ಲಿ ಉಚಿತ ಎಂದು ಹೇಳಿದ್ದರು. ಆಟೋದವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.

ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ್ದರು. ಈಗ ಷರತ್ತು ಹಾಕುತ್ತಿದ್ದಾರೆ. ಗ್ಯಾರಂಟಿಗೆ ವ್ಯಾರಂಟಿ ಇಲ್ಲದಂತಾಗಿದೆ. ಈಗ ಒಂದು ವರ್ಷದ ಸರಾಸರಿ ನೆಪ ಹೇಳುತ್ತಿದ್ದಾರೆ. ಉಚಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದು ಜನರಿಗೆ ಮಾಡುತ್ತಿರುವುದು ಮೋಸವಲ್ಲವೇ?, ನಿರುದ್ಯೋಗಿ ಪದವೀಧರ ಮತ್ತು ಡಿಪ್ಲೋಮಾದವರಿಗೆ ಯುವನಿಧಿಯಡಿ ಭತ್ಯೆ ಕೊಡುವುದು ಪ್ರಾರಂಭವೇ ಆಗಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರೂ. ಕೊಡುತ್ತೇವೆ ಎಂದು ಹೇಳಿದ್ದರು. ಈಗ ಅತ್ತೆಗಾ, ಸೊಸೆಗಾ ಎನ್ನುತ್ತಿದ್ದಾರೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿ ಹೊರತುಪಡಿಸಿ ನೀವು ಭರವಸೆ ನೀಡಿದಂತೆ 10 ಕೆಜಿ ನೀಡಬೇಕೆಂದು ಆಗ್ರಹಿಸಿದರು. ಈ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡುವಂತೆ ಒತ್ತಾಯಿಸಿದರು.

ಇದನ್ನೂ ಓದಿ:ಐದೂ ಗ್ಯಾರಂಟಿಯನ್ನು ಇದೇ ಆರ್ಥಿಕ ವರ್ಷದಲ್ಲಿ ಈಡೇರಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details