ಬೆಂಗಳೂರು:ಕೊರೊನಾ ಹರಡುವಿಕೆಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮುಂದೂಡಲಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ನಾಳೆಯಿಂದ ನಡೆಯಲಿವೆ. ಇದಕ್ಕಾಗಿ ಎಲ್ಲಾ ಅಂತಿಮ ಹಂತದ ಅಗತ್ಯ ತಯಾರಿಗಳು ನಡೆಯುತ್ತಿವೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ 27 ರಿಂದ ಏಪ್ರಿಲ್ 9 ರವರೆಗೆ ಪರೀಕ್ಷೆ ನಡೆದು ಈ ಹೊತ್ತಿಗಾಗಲೇ ಪರೀಕ್ಷಾ ಫಲಿತಾಂಶಗಳು ಬರುತ್ತಿದ್ದವು. ಆದರೆ ಕೊರೊನಾದಿಂದಾಗಿ ಎಲ್ಲವೂ ಬದಲಾವಣೆ ಆಯ್ತು. ಇದೀಗ ಕೊರೊನಾ ಬಿಕ್ಕಟ್ಟು ಹಿನ್ನೆಲೆ ಮುಂದೂಡಿಕೆಯಾಗಿದ್ದ ಪರೀಕ್ಷೆಗಳು ನಾಳೆಯಿಂದ ಜುಲೈ 4 ರವರೆಗೆ ನಡೆಯಲಿದೆ.
ನಾಳೆ 80 ಅಂಕದ ದ್ವಿತೀಯ ಭಾಷೆ ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆ ನಡೆಯಲಿದ್ದು, ನಾಳೆ ಬೆಳಗ್ಗೆ 10:30 ಕ್ಕೆ ಪರೀಕ್ಷೆ ಆರಂಭವಾಗಿ ಮಧ್ಯಾಹ್ನ 1:30 ರವರೆಗೆ ಪರೀಕ್ಷೆ ಮುಗಿಯಲಿದೆ.
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಿಶೇಷ ಸೂಚನೆ ನೀಡಿದ್ದು, ಕೊರೊನಾ ವೈರಸ್ ಸೋಂಕು ಹರಡದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ಅಭ್ಯರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತೆ. ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ಗಳನ್ನ ವಿದ್ಯಾರ್ಥಿಗಳಿಗೆ ವಿತರಿಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಕ್ಕೆ 9:30ರೊಳಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ನಾಳೆ ನಾಡಿನ ಸುಮಾರು 8,48,203 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. 4,48,560 ವಿದ್ಯಾರ್ಥಿಗಳು, 3,99,643 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ. ಸರ್ಕಾರಿ ಶಾಲೆಗಳಿಂದ 3,31,652 ಅನುದಾನಿತ ಶಾಲೆಗಳಿಂದ 2,29,381, ಅನುದಾನರಹಿತ ಶಾಲೆಗಳಿಂದ 2,87,170 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ:
ನಗರ ಪ್ರದೇಶದಿಂದ- 3,78,337 ಗ್ರಾಮೀಣ ಪ್ರದೇಶದಿಂದ- 4,69,866 ವಿದ್ಯಾರ್ಥಿಗಳು ಬರೆಯಲಿದ್ದಾರೆ. ರಾಜ್ಯಾದ್ಯಂತ ವಿಶೇಷ ಅಗತ್ಯತೆಯುಳ್ಳ 4,777 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಿಗಾಗಿ ಹೆಚ್ಚುವರಿ ಪರೀಕ್ಷೆ ಬರೆಯಲು 1 ಗಂಟೆ ಸಮಯ ನೀಡಲಾಗುತ್ತದೆ. ಇನ್ನು ಸುಮಾರು 12,674 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡಿದ್ದಾರೆ.
ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ 2879 ಪರೀಕ್ಷಾ ಕೇಂದ್ರಗಳೊಂದಿಗೆ ಹೆಚ್ಚುವರಿಯಾಗಿ 330 ಬ್ಲಾಕ್ ಪರೀಕ್ಷೆ ಕೇಂದ್ರಗಳನ್ನು ರಚಿಸಲಾಗಿದೆ. ಪ್ರತಿ ಕೊಠಡಿಯಲ್ಲಿ ಗರಿಷ್ಠ 18ರಿಂದ 20 ಮಕ್ಕಳು ಇರುವಂತೆ ಒಂದು ಬೆಂಚಿಗೆ ಇಬ್ಬರು ಮಾತ್ರ ಕೂರುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ. 57 ಸೂಕ್ಷ್ಮ ಪರೀಕ್ಷಾ ಕೇಂದ್ರವಾದರೆ, 4 ಅತೀ ಸೂಕ್ಷ್ಮ ಪ್ರದೇಶಗಳಿವೆ. ಶಿಕ್ಷಣ ಇಲಾಖೆಯಿಂದಲೇ ಪರೀಕ್ಷಾ ಕಾರ್ಯಕ್ಕೆಂದು ಸುಮಾರು 81,265 ಮಂದಿಯನ್ನ ನಿಯೋಜನೆ ಮಾಡಲಾಗಿದೆ. ಇತರೆ ಇಲಾಖೆಯಿಂದ 19,222 ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಿಸಲು ಮಂಡಳಿಯಿಂದ 7,115 ಥರ್ಮಲ್ ಸ್ಕ್ಯಾನರ್ಗಳನ್ನ ಒದಗಿಸಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ, 34 ತಾಲೂಕಿನಲ್ಲಿ 204 ಹೆಲ್ಪ್ ಡೆಸ್ಕ್ಗಳನ್ನ ತೆರೆಯಲಾಗಿದೆ. 3,209 ಆರೋಗ್ಯ ತಪಾಸಣಾ ಕೌಂಟರ್ಗಳನ್ನು ತೆರೆಯಲಾಗಿದೆ.
ಕಂಟೈನ್ಮೆಂಟ್ ಝೋನ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ:
ಕಂಟೈನ್ಮೆಂಟ್ ವಲಯದಿಂದ ಬರುತ್ತಿರುವ ವಿದ್ಯಾರ್ಥಿಗಳಿಗೆ ಎನ್- 95 ಮಾಸ್ಕ್ ವಿತರಿಸಲಾಗುತ್ತಿದ್ದು, ಅನಾರೋಗ್ಯಕರ ವಿದ್ಯಾರ್ಥಿಗಳಿಗೆ ಹಾಗೂಕಂಟೈನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ಮೀಸಲಿಡಲಾಗುತ್ತದೆ. ಪ್ರತಿ ವಿದ್ಯಾರ್ಥಿಗಳಿಗೆ ತಲಾ ಎರಡು ಮಾಸ್ಕ್ನಂತೆ ಒಟ್ಟು 18 ಲಕ್ಷ ಮಾಸ್ಕ್ಗಳನ್ನ ಉಚಿತವಾಗಿ ನೀಡಲಾಗಿದೆ.
ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ:
ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿ, ಬಿಎಂಟಿಸಿ ಕೆಎಸ್ಆರ್ಟಿಸಿಯಲ್ಲಿ ಉಚಿತ ಪ್ರಯಾಣ ಮಾಡಬಹುದು. ವಿದ್ಯಾರ್ಥಿಗಳಿಗೆ ಕೋರಿಕೆ ನಿಲ್ದಾಣಕ್ಕೂ ಅವಕಾಶ ಕಲ್ಪಿಸಲಾಗಿದೆ.
ತಮ್ಮದೇ ಪ್ರತ್ಯೇಕ ಬ್ಯಾಗಿನಲ್ಲಿ ನೀರಿನ ಬಾಟಲ್ ಹಾಗೂ ಅವಶ್ಯಕತೆ ಇದ್ದಲ್ಲಿ ಆಹಾರದ ಡಬ್ಬಿ ತರಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಡಿಸ್ಪೋಸೆಬಲ್ ವಾಟರ್ ಗ್ಲಾಸ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಸೋಂಕು ನಿವಾರಣಾ ದ್ರವಗಳನ್ನು ಸಿಂಪಡಿಸಿ ಸ್ವಚ್ಛಗೊಳಿಸಲು ಸೂಚಿಸಲಾಗಿದೆ. ಪರೀಕ್ಷೆಗೆ ಮುನ್ನ ಹಾಗೂ ಪರೀಕ್ಷೆ ಮುಗಿದ ನಂತರ ಪರೀಕ್ಷಾ ಕೊಠಡಿಗಳು, ಪೀಠೋಪಕರಣಗಳನ್ನ ಸ್ಯಾನಿಟೈಸ್ ಮಾಡಲು ಹಾಗೂ ಪರೀಕ್ಷಾ ಕೇಂದ್ರದ ಶೌಚಾಲಯವನ್ನು ಪ್ರತಿದಿನ ಪರೀಕ್ಷೆಗೂ ಮುನ್ನ ಹಾಗೂ ಪರೀಕ್ಷೆ ನಂತರ ಶುಚಿಗೊಳಿಸಲು ಸೂಚಿಸಲಾಗಿದೆ.
ಪರೀಕ್ಷೆ ಕೇಂದ್ರಕ್ಕೆ ಬಂದರೆ ಇವೆಲ್ಲವೂ ನಿಷೇಧ:
ಪರೀಕ್ಷಾ ಅಕ್ರಮಗಳು ನಡೆಯದಂತೆ ಹಾಗೂ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಕೇಂದ್ರ ಕಂಪ್ಯೂಟರ್ ಸೈಬರ್ ಸೆಂಟರ್ಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಆದೇಶಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಅಧಿಕಾರಿಗಳು ಬೇಸಿಕ್ ಸೆಟ್ ಮೊಬೈಲ್ ಫೋನ್ ಬಳಸಬಹುದು. ವಿದ್ಯಾರ್ಥಿಗಳು ಡಿಜಿಟಲ್ ವಸ್ತುಗಳನ್ನು ತರುವಂತಿಲ್ಲ.