ಬೆಂಗಳೂರು: ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಸಮಿತಿ ವರದಿಯನ್ನು ಮಂಗಳವಾರ ಸರ್ಕಾರಕ್ಕೆ ಸಲ್ಲಿಸಿದೆ. ಮರಳಿ ಕಾಲೇಜಿಗೆ ಕಾರ್ಯಕ್ರಮ ಮಾಡಬೇಕು. ಆದ್ಯತೆ ಆಧಾರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಕೊಡುವ ಗುರಿ ಇದೆ. ಈ ಬಗ್ಗೆ ನಿನ್ನೆ ಚರ್ಚೆ ನಡೆಯಿತು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜುಲೈ ಮೊದಲ ವಾರ ಅಥವಾ 2ನೇ ವಾರದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲು ಕ್ರಮ ರೂಪಿಸಲಾಗುತ್ತಿದೆ. ಬೋಧಕರು, ಬೋಧಕೇತರರು, ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ ಬಳಿಕ ಕಾಲಕ್ರಮೇಣ ತರಗತಿಗಳನ್ನು ಆರಂಭ ಮಾಡಲಾಗುವುದು. ಡೆಲ್ಟಾ, ಡೆಲ್ಟಾ ಪ್ಲಸ್ ವೈರಸ್ ಗಳಿಗೆ ಲಸಿಕೆಯೇ ಸಂಜೀವಿನಿ. ಕೋವಿಡ್ ಹೆಚ್ಚು ಹರಡುವ ಮೂಲಕ ರೂಪಾಂತರ ಆಗಲಿದೆ. ಇದಕ್ಕೆ ಲಸಿಕೆಯೇ ರಾಮಬಾಣ ಎಂದರು.