ಬೆಂಗಳೂರು:ಉಪಚುನಾವಣೆಯಲ್ಲಿ ಸೋಲು, ಗೆಲುವಿನ ಬಗ್ಗೆ ಚರ್ಚಿಸುವುದಕ್ಕಿಂತ 2023 ರ ಸಾರ್ವತ್ರಿಕ ಚುನಾವಣೆಗೆ ನಾನು ಈಗಿನಿಂದಲೇ ಕೆಲಸ ಮಾಡಬೇಕೆಂದು ತೀರ್ಮಾನಿಸಿದ್ದೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಕ್ಷ್ಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಸಭೆ ಮಾಡಿ ಚರ್ಚೆ ಮಾಡಿದ್ದೇವೆ. ನ.8ರಿಂದ ಎರಡನೇ ಹಂತದ ಕಾರ್ಯಾಗಾರ ನಡೆಯಲಿದೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಚರ್ಚೆ ಬೇಡ:
ಉಪ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ಬೇಡ. ಫಲಿತಾಂಶವನ್ನು ಸ್ವಾಗತಿಸುತ್ತೇವೆ. ಜನರ ತೀರ್ಮಾನದಂತೆ ನಡೆಯುತ್ತೇವೆ. ಪ್ರಾದೇಶಿಕ ಪಕ್ಷ ಉಳಿಸಲು ಕೆಲಸ ಮಾಡುತ್ತೇವೆ. ನಾನು ರಾಜಕೀಯವಾಗಿ ಬೆಳೆಸಿದ ಎಂ.ಸಿ. ಮನಗೂಳಿ ಅವರ ಮಗನನ್ನು ಕಾಂಗ್ರೆಸ್ನವರು ಕರೆದುಕೊಂಡು ಹೋದ್ರು. ಚುನಾವಣೆಗೂ ನಿಲ್ಲಿಸಿದ್ರೂ. ಅವರಿಗೆ ಎಷ್ಟು ಮತ ಬಂದಿವೆ. ಎಷ್ಟು ಅಂತರದಲ್ಲಿ ಸೋತರು ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದು ಕುಟುಕಿದರು.
ಕಾಂಗ್ರೆಸ್ ಉಪಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದಕ್ಕೆ ಬೀಗುತ್ತಿದೆ. ಆ ಪಕ್ಷದ ನಾಯಕರ ಬಗ್ಗೆ ನಾನು ಮಾತನಾಡಲ್ಲ. ಸಿದ್ದರಾಮಯ್ಯ ಅವರು ಪಕ್ಷದ ನಾಯಕರಾಗಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಏನೇನ್ ಮಾಡ್ಬೇಕೋ ಮಾಡ್ತಾರೆ. ನಾನು ನಂದೇ ಆದ ಮಾರ್ಗದಲ್ಲಿ ಪಕ್ಷ ಕಟ್ತೀನಿ ಎಂದು ದೇವೇಗೌಡರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಮತ್ತಿತರರು ಇದ್ದರು.